|
ಆ ತೀರಕೆ ಆತ್ಮಯಾನ
ಅದೊಂದು ಅಮವಾಸ್ಯೆಯ ಕರಾಳ ರಾತ್ರಿ. ಜುಂಯ್...... ಎಂದು ಸುಂಯ್ಗುಡುವ ತಿರುಸು ಮುರುಸಿನ ಗಾಳಿ. ಕತ್ತಲೆಯೊಳಗೆ ಭೀತಿ ಕರಗಿಸಿಕೊಂಡ ಕಪ್ಪುಬಣ್ಣದ ಅವಕಾಶ. ಮನೆಯೊಳಗಿನ ಇಲೆಕ್ಟ್ರಿಕ್ ಲೈಟಿನ ಬೆಳಕು ಗಾಜುಗಳ ಮುಖಾಂತರ ಚೂಪು ಚೂಪಗೆ ಹೊರಚೆಲ್ಲಿದ್ದು ಇಂಚಿಂಚು ಟಾರ್ಚ್ ಬೆಳಕಿನಂತೆ. ಹೊರ ಇಣುಕಲಾರದೇ ಭಯಪಟ್ಟು ಕಿಟಕಿಯ ಬೃಹತ್ ಬಾಯನ್ನು ಗಾಜಿನ ಬಾಗಿಲೊಳಗೆ ಮುಚ್ಚಿಟ್ಟು ಒಳನಡೆದರೆ ಒಳಗೊಳಗೇ ಮೂಲೆ ಮೂಲೆಯೊಳಗೂ ಭೀತಿ ತುಂಬಿಕೊಂಡ ಬೋಳು ಬಯಲಿನಂತ ಲೇಔಟಿನಲ್ಲಿ ಒಂಟಿ ಮನೆ. ಆನ್ ಆಗಿದ್ದ ಈ ಲೈಟಿನ ಜೊತೆ ಮನೆಯ ಎಲ್ಲಾ ಲೈಟುಗಳನ್ನೂ ಆನ್ ಮಾಡಿ ಕುಳಿತರೂ ಒಳ ಎಳೆದುಕೊಂಡ ಶ್ವಾಸವನ್ನು ಒಳಗೇ ಯಾರೋ ಹಿಡಿದಿಟ್ಟುಕೊಂಡ ಅನುಭವ. ಮನೆ ಹೊರಗೆ ಆಕಾಶದಲ್ಲಿನ ನಕ್ಷತ್ರಗಳು ಹೊಳೆಯುವ ಹರಳಾಗದೇ ಬಡಿಯುವ ದೆವ್ವದ ಕಣ್ಣಿನಂತೆ,
ದೂರದೂರದಲ್ಲಿ ಒಂಟಿ ಕಣ್ಣಿನ ಪ್ರೇತಗಳು ಕಣ್ಣುತೆರೆದಂತೆ ಕೊರೆಯುತ್ತಿವೆ. ಮನಸ್ಸು ಅಮವಾಸ್ಯೆಯ ಕಮಟಿನಿಂದ ಭಯಾನಕ ಸ್ಥಿತಿಯಲ್ಲಿ ಉರಿಯುತ್ತಿದ್ದರೆ ಮನೆಯೊಳಗೆ ಲಕ್ಷದೀಪೋತ್ಸವದಂತೆ ಎಲ್ಲ ದೀಪಗಳೂ ಉರಿಯುತ್ತಿವೆ. ಸರದಿಯಂತೆ ಸಾಲಾಗಿ ಎಲ್ಲ ಲೈಟುಗಳನ್ನು ಆಫ್ ಮಾಡುತ್ತ ಮಾಡುತ್ತ ಬೆಡ್ ರೂಮಿಗೆ ಬಂದರೆ ಮಗಳು ಸುಖಿ ಸುಖನಿದ್ರೆಯ ಆಳಕ್ಕೆ ಇಳಿದು ತಣ್ಣಗೆ ಮಲಗಿದ್ದಾಳೆ. ಆ ಕೋಣೆಯ ಲೈಟನ್ನೂ ಸ್ವಿಚ್ ಆಫ್ ಮಾಡಲಾಗಿ, ಬೆಡ್ರೂಮ್ ತುಂಬ ಯಾರೋ ಸುಟ್ಟು ಕರಕಲಾದ ಕರ್ರನೆಯ ಕಪ್ಪು ಕತ್ತಲೆಯನ್ನು ತುಂಬಿಟ್ಟು ಹೋದಂತೆನಿಸಿ, ತಲೆಯೊಳಗೆ ‘ಗುಂಯ್’ ಎಂದು ಸದ್ದಾಗಿ ಕಣ್ಣಲ್ಲೂ ಮತ್ತಷ್ಟು ಕತ್ತಲಿಟ್ಟು ನಿದ್ರಾದೇವಿ ಕರೆದಂತೆನಿಸಿ ಕಣ್ಮುಚ್ಚಿ ಹಾಗೆಯೇ ಹಾಸಿಗೆಗೆ ಒರಗಿದ್ದೇ ನೆನಪು, ತಿರುಗಿ ಎಚ್ಚರಾಗಿದ್ದು ಫೋನ್ ಕಿರುಚಿಕೊಂಡಾಗ.
ಅರೆನಿದ್ರೆಯಲ್ಲಿ...
ಹೆಲೋ’ ಎಂದಿದ್ದೇ, ಆ ಕಡೆಯಿಂದ ಒಂದು ಭಯಾನಕವಾದ, ವಿಕಾರವಾದ ಗೊಗ್ಗರಿನ ಧ್ವನಿ, " ನಿನ್ನ ಬಿಡಲ್ಲ.......ಬದುಕೋಕೆ ಬಿಡಲ್ಲ.......ನನ್ ಮಗ್ಳ ಜೀವನ ಹಾಳು ಮಾಡಕ್ಕೆ ನೋಡ್ತೀಯಾ..........ನಿನ್ನ ಬಿಡಲ್ಲಾ........ಹೂಂ.......ಹೂಂ......ಬಿಡಲ್ಲಾ.........." ಏದುಸಿರು ಬಿಡುವ ಕರ್ಕಶವಾದ ಧ್ವನಿಯೊಂದು ಎಳೆದೆಳೆದು ಬಂದಿದಷ್ಟೇ, ನನ್ನ ಉತ್ತರವನ್ನೂ ಬಯಸಿರದ ಆ ಧ್ವನಿ ಅಲ್ಲಿಗೇ ನಿಂತು ಹೋಯಿತು. ಕಾಲರ್ ಐಡಿ ನೋಡಿದರೆ ‘ನಾಟ್ ಅವೈಲಬಲ್’ ಎಂದಿತ್ತು. ಅಲ್ಲೇ ಮೈಯೆಲ್ಲಾ ಬೆವರಿನಲ್ಲಿ ಸ್ನಾನವಾಗಿ ರಿಸಿವರ್ ಹಿಡಿದೇ ಕುಸಿದೆ. ಕೈ ಹತೋಟಿಯಲ್ಲಿಲ್ಲದೇ ಗಡಗುಡುತ್ತಿತ್ತು. ರಿಸಿವರ್ ಬೇಸ್ ಗೆ ಸಿಕ್ಕಿಸಹೋಗಿ ಪಕ್ಕದಲ್ಲಿಟ್ಟಿದ್ದ ಪರ್ಫ್ಯೂಮ್, ಪೆನ್, ಕ್ಯಾಸೆಟ್ಸ್ ಎಲ್ಲಾ ಸಾಲಾಗಿ ಒಂದರ ಬೆನ್ನಿಗೆ ಒಂದನ್ನು ನಿಲ್ಲಿಸಿಟ್ಟ ಪುಸ್ತಕಗಳಂತೆ ‘ದಬಕ್’ ‘ಠಣ್’ ‘ಟಪ್’ ಎನ್ನುವ ತಾಳದೊಂದಿಗೆ ಮೈಮೇಲೆ ಮಳೆಗರೆದವು. ಮೂಗು ತನ್ನ ಕೆಲಸ ಮರೆತದ್ದರಿಂದ ಬಾಯಲ್ಲಿ ಉದ್ದ ಉದ್ದನೆಯ ಶ್ವಾಸ ಬರುತ್ತಿತ್ತು. ನಿಧಾನ ಗತಿಯಲ್ಲಿ ಎದ್ದು ಸುಖಿಯ ಮೈಮೇಲೆ ಬಿದ್ದ ವಸ್ತುಗಳನ್ನೆತ್ತಿ ಕತ್ತಲೆಯಲ್ಲೆಲ್ಲೋ ಪಕ್ಕಕ್ಕಿಡುವ ಕೆಲಸವನ್ನು ಆರನೆಯ ಇಂದ್ರಿಯ ಮಾಡಿಸಿತ್ತು. ಸುಧಿ ಕೆನಡಾಗೆ ಹೋಗಿ ಈ ಹನ್ನೆರಡನೆಯ ತಾರೀಖಿಗೆ ಎರಡು ತಿಂಗಳುಗಳು ಉರುಳುತ್ತವೆ.ಬೇಗ ಬಂದರೆ ಸಾಕಪ್ಪಾ ಅನಿಸಿ, ಲೈಟು ಹಾಕಿದೆ. ಪುಟ್ಟಿಯಿನ್ನೂ ನಿದ್ರೆಯಲ್ಲಿ ಅತ್ತ ಹೊರಳಿ ಮಲಗಿದ್ದಳು. ತುಸು ಸಮಾಧಾನದೊಂದಿಗೆ ಮಗುವನ್ನು ಕಣ್ಣಲ್ಲಿ ತುಂಬಿಕೊಂಡಿದ್ದಕ್ಕೇನೋ ಜವಾಬ್ದಾರಿ ಮನಸ್ಸಿಗೆ ಬಂದು ದಿಟ್ಟ ಧೈರ್ಯವೂ ಬಂತು. ದೀಪವಾರಿಸಿ ಕಣ್ಮುಚ್ಚಿಕೊಂಡರೆ ಹಲವು ವರ್ಷಗಳ ಹಿಂದಿನ ಹಳೆಯ ಕೆಟ್ಟ ಗಳಿಗೆಗಳೆಲ್ಲಾ ಒಂದರ ಬೆನ್ನಲ್ಲಿ ಒಂದು ಬಾಣದಂತೆ ಚುಚ್ಚತೊಡಗಿದ್ದವು.
ಆವತ್ತೂ ಎಂದಿನಂತೆ ಆಫಿಸಿನಿಂದ ಮನೆಗೆ ಬಂದು ಕೈಕಾಲು ಮುಖ ತೊಳೆದು ಡ್ರೆಸ್ ಚೇಂಜ್ ಮಾಡಿ, ಕಾಫಿ ತಯಾರಿಗಾಗಿ ಕಿಚನ್ ಹೊಕ್ಕುವಷ್ಟರಲ್ಲಿ ಬ್ಯಾಗಿನಲ್ಲಿದ್ದ ಸೆಲ್ ‘ಕಿಣಿ ಕಿಣಿ’ ಎಂದಿದ್ದು ‘ಕಿರಿ ಕಿರಿ’ ಎನಿಸಿದರೂ ರಿಸಿವ್ ಮಾಡಿದ್ದು ಅನಿವಾರ್ಯವಾಗಿ. ಯಾವುದೋ ಪರಿಚಯವೇ ಇಲ್ಲದ ನಂಬರ್!
ಹೆಲೋ’ ಎಂದೆ ಮಾಮೂಲಿನ ಧ್ವನಿ ಎಳೆದು. "ನಾನು ಆಂಟಿ, ಜಲಜರವರ ಮಗಳು, ಊರಿಂದ ಕಾಲ್ ಮಾಡ್ತಿದ್ದೀನಿ, ಬೆಂಗಳೂರಲ್ಲಿ ಒಂದು ಕಂಪೆನಿಗೆ ರೆಸ್ಯೂಮೆ ಕೊಡ್ತಾ ಇದ್ದೇನೆ, ಅದ್ರಲ್ಲಿ ನನ್ನ ಟೆಂಪ್ರರಿ ಅಡ್ರೆಸ್ ನಿಮ್ದು ಕೊಡ್ಲಾ?" ಅಂತು ಆ ಕಡೆಯಿಂದ ಅಪರಿಚಿತ ಧ್ವನಿ.
" ಓ...ಜಲಜಾ ಮಗ್ಳಾ? ಹೇಗಿದಾಳಮ್ಮಾ ನಿಮ್ಮಮ್ಮ? ಹೈಸ್ಕೂಲು ಬಿಟ್ಮೇಲೆ ಸಿಗ್ಲೇ ಇಲ್ಲಾ ನೋಡು! ನೀನೀಗ ಏನು ಓದಿದೀಯ?" ಎಂದೆ.
" ಬೀ....ಕಾಮ್." ಆ ಕಡೆಯಿಂದ ರಾಗ. " ಪರವಾಗಿಲ್ಲಾಮ್ಮ, ನಮ್ಮ ಅಡ್ರೆಸ್ ಕೊಡು, ಇಲ್ಲಿಗೆ ಯಾವಾಗ ಬರ್ತಿದ್ದೀಯಾ? ಎಲ್ಲಿ ಇಳ್ಕೊಳ್ತಾ ಇದ್ದೀಯಾ?"
" ನನ್ನ ಅಂಕಲ್ ಒಬ್ರ ಮನೆಲ್ಲಿ, ನಾಳೆ ಬರ್ತಿದ್ದೀನಿ " ಹೀಗೆ ಕಾಲ್ ಮುಗಿದಿದ್ದೇ ವಿಷಯವನ್ನೂ ಮರೆತುಬಿಟ್ಟಿದ್ದೆ.
ಆರೆಂಟು ದಿನಗಳಲ್ಲಿ ಮತ್ತದೇ ನಂಬರಿನಿಂದ ಕಾಲ್. " ಆಂಟಿ, ಇಲ್ಲಿ ನಂಗೆ ಇರಕ್ಕೆ ಬೇಜರಾಗತ್ತೆ, ನಾನು ನಿಮ್ಮನೆಗೆ ಬರ್ಲಾ ಯಾವ್ದಾದ್ರೂ ಪಿಜಿ ಸಿಗೋವರೆಗೂ?"
ಪರಿಚಯವೇ ಇಲ್ಲದ ಈ ಹುಡುಗಿಯ ಪ್ರಶ್ನೆ ಸ್ವಲ್ಪ ಅಸಹಜವೆನಿಸಿದರೂ, ಜಲಜ ಮತ್ತು ನಾನು ಹೈಸ್ಕೂಲಿನಲ್ಲಿ ಕ್ಲ್ಯಾಸ್ಮೇಟ್ಸ್ ಆಗಿ ಮೂರು ವರ್ಷ ಓದಿದವರು. ತುಂಬಾ ಕ್ಲೋಸ್ ಅಲ್ಲದಿದ್ದರೂ ತಕ್ಕಮಟ್ಟಿನ ಆತ್ಮೀಯತೆ ಇಬ್ಬರಲ್ಲೂ ಇತ್ತು. ಇಪ್ಪತ್ಮೂರುವರೆ ವರ್ಷಗಳ ನಂತರ ನನ್ನ ಕಾಂಟಾಕ್ಟ್ ನಂಬರ್ ಗಳಿಸಿ ಮಗಳಿಂದ ಕಾಲ್ ಮಾಡಿಸಿದ್ದಾಗ, ಅದೂ ಸಹಾಯ ಕೇಳುತ್ತಿರುವಾಗ ಹಳೆಯ ಆತ್ಮೀಯತೆ ಹೊಸದೊಂದು ಅಂಗಿ ಹಾಕಿಕೊಂಡು ಬಂದಂತಾಗಿ, ಏನೂ ತೋಚದೇ " ಸರಿ, ಬಾ ನಮ್ಮನೆಗೆ" ಎಂದುಬಿಟ್ಟೆ ಹಿಂದು ಮುಂದೆ ಯೋಚಿಸದೆ. ಇದನ್ನೇ ನಿರೀಕ್ಷಿಸಿದ್ದ ಆ ಕಡೆಯ ಧ್ವನಿ "ಸರೀ..ಆಂಟಿ..ನಾಳೆ ಬರ್ತಿದ್ದೀನಿ" ಅಂತು.
ಸಂಜೆ ಮನೆಗೆ ಬಂದ ಸುಧಿ ವಿಷಯ ತಿಳಿದು, "ಯಾರೋ ...ಏನೋ..ಯಾವ್ದೋ ಹೈಸ್ಕೂಲ್ ಫ್ರೆಂಡ್ ಮಗ್ಳಾ? ಆ ನಿನ್ನ ಫ್ರೆಂಡ್ಗೆ ನಿನ್ನ ಕಾಂಟಾಕ್ಟ್ ಮಾಡಕ್ಕೆ ಇಷ್ಟು ವರ್ಷ ಬೇಕಾಯ್ತಂತಾ? ಎಲ್ರೂ ಹಾಗೆ, ಅವರವರ ಕೆಲ್ಸಕ್ಕೆ ಯಾರನ್ನ ಬೇಕಾದ್ರೂ ನೆನಪಿಸಿಕೊಳ್ತಾರೆ. ಅಲ್ಲಾ...ಆ ಹುಡುಗಿ ಹೇಗೆ, ಏನು, ಎತ್ತಾ, ಏನಾದ್ರೂ ಗೊತ್ತಾ ನಮಗೆ? ಮನೆಲ್ಲಿ ಹೈಸ್ಕೂಲು ಓದ್ತಿರೋ ಮಗ, ಇನ್ನೂ ಎಳೆದೊಂದು ಮಗು, ನಾನು, ನಿನ್ನ ಆಫೀಸ್ ಕೆಲ್ಸ, ಇಷ್ಟ್ರಮಧ್ಯೆ ಅಡುಗೆ ಮಾಡೋದು, ಇವಿಷ್ಟು ಸಾಲ್ದೂ ಅಂತಾ ಆ ಹೂಡುಗಿ ಬೇರೆನಾ? ನಿಂಗೇನಾದ್ರೂ ಬುದ್ಧಿ ಇದ್ಯಾ? ಬೆಳ್ದಿರೋ ಹುಡ್ಗೀರನ್ನ ಮನೆಲ್ಲಿ ಇಟ್ಕೊಳೊದೂ ಒಂದೆ, ಸೆರಗಲ್ಲಿ ಬೆಂಕಿ ಕಟ್ಕೊಳ್ಳೋದು ಒಂದೆ’ ನಾಳೆ ಹೆಚ್ಚುಕಡಿಮೆ ಆದ್ರೆ ಎಲ್ಲಾರೂ ಗೂಬೆ ಕೂರ್ಸೋದು ನಿನ್ ತಲೆಮೇಲೆ. ಏನಾದ್ರೂ ಮಾಡ್ಕೋ." ಅಸಮಧಾನ ಸುಧಿಯ ಮಾತಿನಲ್ಲಿ ಎದ್ದು ಕಂಡಿತ್ತು. ಸಮಯದ ಅಭಾವದೊಂದಿಗೆ ಹೋರಾಡುತ್ತಿದ್ದ ನನ್ನ ಮೇಲಿನ ಪ್ರೀತಿ ಸುಧಿಯ ಬಾಯಲ್ಲಿ ಮಾತಾಗಿ ಹೊರಬಂದಿತ್ತು.
" ಈಗೇನು ಮಾಡ್ಲಿ, ಅವಳಿಗೆ ಬರಲಿಕ್ಕೆ ಹೇಳಿದ್ದಾಗಿದೆಯಲ್ಲಾ!" ಎಂದೆ. "ಏನಾದ್ರೂ ಮಾಡ್ಕೋ, ನಂಗೊತ್ತಿಲ್ಲಾ" ಎಂದು ಟೀ ಕುಡಿದ ಕಪ್ ಸಿಂಕಿನಲ್ಲಿಲ್ಲಿಟ್ಟ ಸುಧಿ ಕೆಲಸದತ್ತ ಧಾವಿಸಿದ್ದರು.
ಆ ಹುಡುಗಿ ಮನೆ ಸೇರಿ ಎಂಟು ದಿನಗಳಲ್ಲಿ ಕೆಲಸಕ್ಕೂ ಸೇರಿಕೊಂಡಿದ್ದಳು. ಅವಳ ಅಂಕಲ್ ಮನೆಯಿಂದ ಇಲ್ಲಿ ಸೇರಿದ್ದು ಯಾಕೆಂಬ ವಿಚಾರಗಳು ನಾಲ್ಕೈದು ದಿನಗಳಲ್ಲಿ ಯಾರೂ ಹೇಳದೆಯೇ ನಮಗೆ ಗೊತ್ತಾಗತೊಡಗಿತ್ತು.
ರಾತ್ರಿ ೧೦:೩೦ಕ್ಕೆ ನಾವೆಲ್ಲಾ ಮಲಗಿಕೊಂಡಮೇಲೆ ಯಾರೊಂದಿಗೋ ‘ಕುಲು ಕುಲು ’ ನಗು ಮೊಬೈಲಿನಲ್ಲಿ! ಒಮ್ಮೆ ಚಿಕ್ಕಧ್ವನಿ, ಇನ್ನೊಮ್ಮೆ ದೊಡ್ದಧ್ವನಿ, ಪಿಸುಪಿಸು’ ಮಾತುಗಳು ಮತ್ತೆ ನಗು ನಮ್ಮ ಬೆಡ್ ರೂಮ್ ಬಾಗಿಲನ್ನು ಬಡಿಯುವ ಹಾಗೆ. ನಾಲ್ಕೈದು ದಿನ ನೋಡಿ ಒಂದು ಬೆಳಿಗ್ಗೆ ಕೇಳಿದೆ, "ಯಾರಮ್ಮಾ ಅದು, ಸರಿ ರಾತ್ರಿಯಲ್ಲಿ ಅಷ್ಟು ಹೊತ್ತು ಫೋನಲ್ಲಿ ಮಾತಾಡೋರು?"
"ಅದೂ...ಆಂಟಿ..ಅವರು ನನ್ನ ಮದುವೆ ಆಗೋರು, ಅವರು ಆಫಿಸಿನಿಂದ ಬಂದ್ಮೇಲೆ ನನ್ ಜೊತೆ ಮಾತಾಡ್ತಾರೆ."
"ಸರೀ.. ಇದೆಲ್ಲಾ ನಿನ್ನ ತಂದೆತಾಯಿಗೆ ಗೊತ್ತಾ?" ಕೇಳಿದೆ ಭಯವಾಗಿ.
"ಗೊತ್ತು ಆಂಟೀ...ಅವರು ನಮ್ಮನೆಗೆ ಎಷ್ಟೊಂದು ಸಲ ಬಂದು ಹೋಗಿದಾರೆ,ನಮ್ಮೆನೆಗೆ ಬಂದ್ರೆ ಎರ್ಡು ದಿನ ನಮ್ಮನೆಲ್ಲೇ ಇರ್ತಾರೆ. ಜನವರಿಯಲ್ಲಿ ನಮ್ಮ ಮದ್ವೆ ಆಗ್ತಿದೆ." ಆ ಹುಡುಗಿ ಇರದ ಸಂಕೋಚವನ್ನು ತಂದುಕೊಂಡು ಉಸುರಿದ್ದಳು.
"ಇದ್ಯಾವ ಸೀಮೆಯವ್ರು, ಮದ್ವೆಗೆ ಮೊದ್ಲು ಹುಡುಗನ್ನ ಮನೆಲ್ಲಿ ಇರಸ್ಕೊಳ್ಳೋರು!" ಅಂತ ಅನ್ನಿಸಿದ್ದರೂ, ಬದಲಾದ ಕಾಲವನ್ನು ನೆನಪಿಸಿಕೊಂಡು, ಅಲ್ಲದೇ ಈ ವಿಚಾರ ತಂದೆತಾಯಿಗೆ ಗೊತ್ತಿದೆ ಎಂಬುದು ತಿಳಿದಿದ್ದೇ ಸುಮ್ಮನಾಗಿಬಿಟ್ಟಿದ್ದೆ.
ಆದಷ್ಟು ಬೇಗ ಸಾಗ ಹಾಗಬೇಕು ಎನ್ನಿಸುವ ಮಟ್ಟಿಗಿನ ಅವಳ ಅಸಭ್ಯ ವರ್ತನೆಗಳು! ಬೆಳಗ್ಗೆದ್ದು ಮುಖ ತೊಳೆದು ಟೀವಿ ಹಾಕಿ, ನ್ಯೂಸ್ ಪೇಪರ್ ಓದುವ ಅವಳ ಹಾವಭಾವವನು ಸಹಿಸಿಕೊಂಡರೂ, ಓದುತ್ತ ರೂಮಿನಲ್ಲಿ ಕುಳಿತ ಸುಶ್ರವ್ ನನ್ನು ಕರೆದು "ಸುಶ್ರವ್, ನನ್ ಡ್ರೆಸ್ ಗೆ ಒಂಚೂರು ಐರನ್ ಮಾಡಿಸ್ಕೊಂಡು ಬಾರೋ" ಎನ್ನುವ ವಯಸ್ಸಿಗೆ ತಾಳೆಯಾಗದ ಅವಳ ಬುದ್ಧಿ ಅಸಹನೀಯವಾಗುತ್ತಿತ್ತು.
ಬೆಳಿಗ್ಗೆ ಕಿಚನ್ನಲ್ಲಿ ನಾನೊಬ್ಬಳು ಸಾಕಾಗದೇ ಸುಧೀ ಕೂಡ ಕೈ ಜೋಡಿಸಿದರೂ ಮುಗಿಯದಷ್ಟು ಕೆಲಸ. ಬೆಳಗ್ಗಿನ ಎಲ್ಲರ ತಿಂಡಿ, ಐದು ಜನರಿಗೆ ಲಂಚ್ ರೆಡಿಯಾಗಬೇಕು, ಬೆಳಿಗ್ಗೆ ಹಾಲು ಮಾತ್ರ ಕುಡಿದು ಡೇಕೇರ್ ಗೆ ಹೋಗುವ ಸುಖಿಗೆ ಇನ್ನೊಂದು ಬಾಕ್ಸ್ ಇಷ್ಟು ಮುಗಿಸಿ ಎಲ್ಲರನ್ನು ಅವರವರ ಸ್ಕೂಲ್, ಆಫೀಸ್ ಗಳಿಗೆ ಸಾಗಹಾಕಿ ನಾನು ಹೊರಟಾಗ ‘ಸಾಕಪ್ಪಾ’ ಎನಿಸುತ್ತಿತ್ತು.
ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಡೈನಿಂಗ್ ಟೇಬಲ್ ಮೇಲೆ ಕಾಣುವ ಅವಳ ಹಾಲಿನ ಗ್ಲಾಸ್! ಮತ್ತೆ ಅವಳ ನಂಬರ್ ಗೆ ಡಯಲ್ ಮಾಡಿ "ಹೆಲೋ ಭಾರ್ಗವಿ...ನೀನು ಹಾಲು ಕುಡಿದಿಲ್ಲ ಯಾಕೆ?" ಎಂದರೆ "ಮರ್ತೋಯ್ತು ಆಂಟೀ.." ಎನ್ನುವ ಅವಳ ಧ್ವನಿಯಲ್ಲಿ," ದಿನವೂ ಗ್ಲಾಸ್ ಕೈಯಲ್ಲಿ ಹಿಡಿಸುವ ನೀವು, ಇವತ್ಯಾಕೆ ಟೇಬಲ್ ಮೇಲೆ ಇಟ್ಟಿರಿ?" ಎಂಬಂತ ಭಾವವೇ ಕೇಳಿಸಿತ್ತು.
ಈಗೀಗ ರಾತ್ರಿಯ ಒಂದು ಕಾಲ್ ನಿಂತು ಹೋಗಿ ಸಾಯಂಕಾಲವೇ ಅಂತಹ ಅದೆಷ್ಟೋ ಕಾಲ್ ಗಳಲ್ಲಿ ಹುಡುಗಿ ಬ್ಯೂಸಿಯಾಗಿದ್ದು ನಮ್ಮ ಭಯದ ಉರಿಗೆ ತುಪ್ಪ ಸುರಿದಿತ್ತು.
ಒಂದು ವಾರಾಂತ್ಯದ ಶನಿವಾರ! ವಿಶ್ರಾಂತಿಗೆ ಅವಕಾಶವೇ ಇಲ್ಲ. ಇವಳ ಮೊಬೈಲ್ ಮಾತುಕತೆ ನಮ್ಮ ನಿದ್ರೆಗೆ ಭಂಗ ತಂದಿತ್ತು. ಕಾಲ್ ಮುಗಿಸಿ ಬಂದ ಹುಡುಗಿಗೆ ವಿಧಿಯಿಲ್ಲದೇ ಕೇಳಿದೆ. "ಯಾರು ಕಾಲ್ ಮಾಡಿದ್ರಮ್ಮಾ?"
"ಇಲ್ಲಿ ಬಂದ ಮರುದಿನ ಒಂದು ಕಂಪೆನಿಗೆ ಇಂಟರ್ವ್ಯೂ ಕೊಡಲು ಹೋಗಿದ್ದಾಗ ಈ ಹುಡುಗನ ಪರಿಚಯ ಆಯ್ತು, ಅವರು ನಮ್ಮ ಅಂಕಲ್ ಗೆ ಗೊತ್ತು. ಅಪ್ಪ ಅಮ್ಮಂಗೂ ಗೊತ್ತು" ಅಂತ ಅವಳು ಸುಳ್ಳು ಹೇಳಿದ್ದರ ಅರ್ಥ ಮಾತ್ರ ಹೊಳೆಯದೇ ಹೋಗಿದ್ದು, ಬರಿಯ ಫ್ರೆಂಡ್ ಶಿಪ್ ಇರಬಹುದು’ ಎಂಬ ನಮ್ಮ ತಪ್ಪರಿವಿನಿಂದಾಗಿ. ನಂತರ ಅವಳು ಮತ್ತೊಂದು ಕಾಲ್ ಅಟೆಂಡ್ ಮಾಡಿದ್ದಳು, ಆ ವಿಷಯ ಅಲ್ಲಿಗೇ ಬಿಟ್ಟೂ ಹೋಗಿತ್ತು.
ಅದೇ ದಿನ ಸಂಜೆ "ಎಲ್ಲೂ ಪಿಜಿ ಸಿಕ್ತಾ ಇಲ್ಲಾ, ಇಲ್ಲೆ ಒಂದು ಪಿಜಿಯಲ್ಲಿ ಕೇಳ್ದೆ,ಅವರು ವೇಕೆನ್ಸಿ ಇಲ್ಲಾ ಅಂತಿದ್ದಾರೆ, ನೀವು ಬಂದು ಮಾತಾಡಿದ್ರೆ ಅವ್ರು ನನ್ನ ಸೇರಿಸ್ಕೊಳ್ಳಬಹುದು." ಎಂದಿದ್ದಳು.
ರಾತ್ರಿಯ ಅಡುಗೆಯನ್ನು ಮುಗಿಸಿ ಎಂಟುಗಂಟೆಯ ಸುಮಾರಿಗೆ ಮನೆಯಿಂದ ಅರ್ಧಮೈಲಿ ದೂರದಲ್ಲಿದ್ದ ಆ ಪಿಜಿಗೆ ಹೋಗಿ ವಿಚಾರಿಸಿದರೆ , ಅಲ್ಲಿ ಓನರ್, ಪಿಜಿಯಾಗಲಿರುವ ಹುಡುಗಿಯನ್ನು ಬಿಟ್ಟು ಗಾರ್ಡಿಯನ್ ಆಗಿ ಹೋದ ನನ್ನನ್ನು ಸಂದರ್ಶನ ಮಾಡುತ್ತಿದ್ದಾಳೆ. ನನ್ನ ಊರು, ಕೇರಿ, ವಿಳಾಸ, ಕೆಲಸ, ಗಂಡ ಮಕ್ಕಳು ಎಲ್ಲವುಗಳ ಜಾತಕ ತೆಗೆದುಕೊಂಡು, ತಪಾಸಣೆ ನಡೆಸಿ, ತುಂಬ ಕಾಳಜಿಯಿಂದ ಹುಡುಗಿಗೆ "ನೆಕ್ಸ್ಟ್ ವೀಕ್ ಬಾಮ್ಮಾ, ಒಂದು ಬೆಡ್ ಖಾಲಿ ಇರುತ್ತೆ." ಎಂದರಾಕೆ ಸರ್ಕಾರಿ ಆಸ್ಪತ್ರೆಯಲ್ಲಿ ಹೇಳುವಂತೆ. ಅನಿವಾರ್ಯವಾಗಿ ನನ್ನ ಅಡ್ರೆಸ್, ಫೋನ್ ನಂಬರ್ ಎಲ್ಲಾ ಕೊಟ್ಟು ಪಿಜಿಗೆ ಅಡ್ಮಿಷನ್ ಮಾಡಿಸಿ, ಕಳಿಸಿಕೊಟ್ಟ ಮೇಲೆ ಆ ಹುಡುಗಿ ನಮ್ಮನೆಯ ದಿಕ್ಕಿಗೆ ಮುಖವನ್ನೂ ಕೂಡ ಹಾಕದಷ್ಟು ಕೄತಘ್ನಳಾಗಿದ್ದು ನಮಗೇನೂ ಅನ್ನಿಸಲೇ ಇಲ್ಲ. ನಮ್ಮ ಕೆಲಸಗಳ ಒತ್ತಡದ ನಡುವೆಯೂ ಮಾನವೀಯ ದೃಷ್ಟಿಯಿಂದ ಒಂದೆರಡು ಬಾರಿ ನಾವೇ ರಾತ್ರಿ ಎಂಟು ಗಂಟೆಯಲ್ಲಿ ಆಫೀಸಿನಿಂದ ಬರುವಾಗ ಅವಳನ್ನು ಪಿಜಿಯಲ್ಲಿ ವಿಚಾರಿಸಲಾಗಿ ‘ಅವಳು ಇನ್ನೂ ಬಂದಿಲ್ಲ’ ಎಂಬ ಉತ್ತರ ಕಾದಿರುತ್ತಿತ್ತು.
ಕೆಲ ದಿನಗಳ ನಂತರ ಆ ಹುಡುಗಿ ಮೊದಲು ಸುತ್ತಾಡಿಸಿದ ಹುಡುಗನನ್ನು ಬಿಟ್ಟು, ಇನ್ನೊಬ್ಬ ನತದೄಷ್ಟ ಹುಡುಗ ಇವಳ ಆಟದ ಸುಳಿಯಲ್ಲಿ ಸಿಕ್ಕಿಬಿದ್ದ ವಿಷಯ ಲೇಟಾಗಿ ತಿಳಿದಿತ್ತು. ಆಕಸ್ಮಿಕವಾಗಿ ಭೇಟಿಯಾದಾಗ ಸಹಜವಾಗಿ ಕೇಳಿದ್ದೆ, "ಏನಮ್ಮಾ ಇದೆಲ್ಲಾ?" ಎಂದು.
"ಆಂಟೀ.. ಅವನಿಗೆ ತುಂಬಾ ಸಂಶಯ, ನಾನು ಯಾರೊಂದಿಗೂ ಫೋನಲ್ಲಿ ಮಾತಾಡೋ ಹಾಗಿಲ್ಲ, ಅದಕ್ಕೂ ಒಂದರ್ಥ ಹಚ್ತಿದ್ದ." ಎಂದಳು. "ಅಯ್ಯೋ! ಗಂಡಸರ ಸ್ವಭಾವವೇ ಹಾಗೇಮ್ಮಾ, ಎಲ್ರೂ ಹಾಗೆ ಇರ್ತಾರೆ." ಎಂದು ಮೇಲಿಂದ ಅವಳ ಸಮಾಧಾನಕ್ಕೆ ಗಂಡಸರನ್ನು ದೂರಿದ್ದರೂ,ಇವಳು ಹೀಗೆ ದೊಡ್ದ ಬ್ಯುಸಿನೆಸ್ ಮ್ಯಾನ್ ಹಾಗೆ ಇಡೀದಿನ ಹುಡುಗರ ಕಾಲ್ ಅಟೆಂಡ್ ಮಾಡುತ್ತಾ ಬ್ಯುಸಿಯಾಗಿದ್ದರೆ, ಅವನು ಕೇಳ್ದೇ ಇದ್ರೇನೇ ಅವನಲ್ಲೇನೋ ಕೊರತೆಯಿದೆ ಎಂದುಕೊಳ್ಳಬೇಕಾದೀತು’ ಎನಿಸಿದ್ದು ನಿಜ.
"ಅವನಿಗೆ ಬರೋ ತಿಂಗಳ ಸಂಬಳ ಹದಿನೈದು ಸಾವಿರ ಇಟ್ಕೊಂಡು ಈ ಬೆಂಗಳೂರಲ್ಲಿ ಜೀವನ ಮಾಡಕ್ಕಾಗುತ್ತಾ?" ಎಂದಿದ್ದಳಲ್ಲ ಹುಡುಗಿ! ಈ ಯೋಚನೆ ಇಲ್ಲಿಗೆ ಬರುವ ಮೊದಲು ಅವನ ಜೊತೆ ಆಟ ಆಡೋವಾಗ ಬರ್ಲಿಲ್ಲವಾ? ಈಗ ಈ ಹುಡುಗನ ಕಿಸೆ ಬರಿದು ಮಾಡಿ, ಇವನನ್ನೂ ಬಿಡುವ ಯೋಚನೆ ಇದೆಯಾ’ ಎಂದು ಕೇಳೋಣವೆನಿಸಿದರೂ ಹೇಳಲಿಲ್ಲ. ಫ್ರೆಂಡ್ ಮಗಳೆಂಬ ಕಾರಣದಿಂದ ಇಷ್ಟು ಕಳಕಳಿ ತೋರಿಸಿದ್ದೇ ನನಗೆ ಮುಳುವಾಗಿತ್ತು.
ಅವಳಿಗೆ ಮೊದಲು ಗಂಡನೆನಿಸಿದ್ದ ಹುಡುಗ ಆ ಹುಡುಗಿಯ ವಿಷಯವಾಗಿ ದಿನಾ ನಮಗೆ ಕಾಲ್ ಮಾಡುತ್ತಿದ್ದ ."ನನ್ನನ್ನು ಬಿಟ್ಟುಬಿಡಲು ನೀವೇ ಪ್ರೇರೇಪಿಸಿದ್ದಂತೆ, ನನ್ನ ಸಂಬಳ ಕಮ್ಮಿ ಅಂದ್ರಂತೆ, ಅವಳಿಗೆ ನಿಮ್ಮ ಸಪೋರ್ಟ್ ಇದೆಯಂತೆ, ಅದಿಕ್ಕೇ ಅವಳು ನಿಮ್ಮನೆಯಲ್ಲಿ ಇರುವಾಗ್ಲೇ ನನ್ನ ಬಿಟ್ಟಿದ್ದು, ನೀವೇ ಈಗ ನಿಂತು ಅವಳ ಜೊತೆ ನನ್ನ ಮದ್ವೆ ಮಾಡ್ಸಿ" ಎಂದೆಲ್ಲಾ ಮೊದಮೊದಲು ಅಬ್ಬರಿಸುತ್ತಿದ್ದ ಅವನ ಧ್ವನಿ, ಕ್ರಮೇಣ ನಮ್ಮ ಧ್ವನಿಗೆ ಹೆದರಿ, ನಿಧಾನಕ್ಕೆ ಗೋಗರೆಯುವ ಮಟ್ಟಕ್ಕೆ ಇಳಿದಿತ್ತು, ನಮ್ಮನೆಯಲ್ಲಿ ದೇವರ ಪೂಜೆ ತಪ್ಪಿದರೂ ಇವನ ಕಾಲ್ ನ ಕಾಟ ತಪ್ಪುತ್ತಿರಲಿಲ್ಲ.
"ಬಿಟ್ಟರೆ ಬಿಡಲಿ ಬಿಡು,ನಿನ್ನ ಅದೄಷ್ಟ ಚೆನ್ನಾಗಿದೆ ಅಂತ ತಿಳ್ಕೋ." ಎಂದು ಸುಧಿ ಒಂದು ದಿನ ಅವನಿಗೆ ಸಮಾಧಾನವಾಗಿ ಬುದ್ಧಿ ಹೇಳಿದ್ದು ವ್ಯರ್ಥವಾಯಿತು. ಇತ್ತ ನಾನವಳನ್ನು ಕರೆದು "ನೀನು ಹೀಗೆ ಸಂಬಳದ ಸಲುವಾಗಿ ಅವನನ್ನ ಬಿಟ್ರೆ, ಈ ಹೊಸ ಹುಡುಗನ ಸಂಬಳಕ್ಕಿಂತ ಜಾಸ್ತಿ ಸಂಬಳ ತೊಗೊಳೋರು ಸಿಕ್ಕಿದ್ರೆ ಇವನನ್ನೂ ಬಿಡ್ತೀಯಾ ಹಾಗಾದ್ರೆ!" ಎಂದಿದ್ದಕ್ಕೆ ಉತ್ತರ ಬರಲಿಲ್ಲ. ನಾನು ಈ ಕೋಣನ ಮುಂದೆ ಕಿನ್ನರಿ ಬಾರಿಸಿದ್ದು, ಸುಧಿ ಆ ಬೋರ್ಗಲ್ ಮೇಲೇ ನೀರೆರೆದದ್ದೂ, ಎರಡೂ ಪ್ರಯೋಜನಕ್ಕೆ ಬರಲಿಲ್ಲ.
ಈ ಹುಡುಗನ ಜೊತೆ ಎಂಗೇಜ್ಮೆಂಟ್ ಕೂಡ ಆಯಿತು. ನಮಗೂ ಆಮಂತ್ರಣವಿದ್ದುದರಿಂದ, ಆ ಊರಿನ ದೊಡ್ದ ದೇವಸ್ಥಾನದಲ್ಲಿ ತೇರು ಕೂಡ ಜರುಗುತ್ತಿದ್ದ ದಿನವೇ ಆ ಎಂಗೇಜ್ಮೆಂಟ್ ಇದ್ದುದರಿಂದ, ಹೋಗಿ ಅವರಿಗೆ ಅಕ್ಷತೆ ಹಾಕಿ ತೇರನ್ನು ನೋಡಿಕೊಂಡು ಬಂದೆವು. ಕೊನೆಯಲ್ಲಿ ಅಂತೂ ಈ ಹುಡುಗನನ್ನ ಮದುವೆ ಆಗುತ್ತಿದ್ದಾಳಲ್ಲಾ ಎಂಬ ಸಮಾಧಾನದಿಂದ ಮನೆಗೆ ಬಂದಷ್ಟಕ್ಕೆ ಇದು ಮುಗಿಯಲೇ ಇಲ್ಲಾ!
ಇದ್ದಕ್ಕಿದ್ದಂತೆ ಒಂದು ಬೆಳಿಗ್ಗೆ ಮನೆಯ ಬಾಗಿಲನ್ನು ‘ದಬ ದಬ’ ಯಾರೋ ಅಸಂಬದ್ಧವಾಗಿ ಬಡಿದು, ಬಾಗಿಲು ತೆರೆದರೆ, ಅಲ್ಲಿ ತಲೆಯಲ್ಲಾ ಕೆದರಿ, ಅಸ್ತವ್ಯಸ್ಥ ಬಟ್ಟೆ ತೊಟ್ಟ ವ್ಯಕ್ತಿಯೊಬ್ಬ ಬಾಗಿಲೆದುರು ತೇಲುತ್ತಾ ಓಲಾಡುತ್ತಿದ್ದ, ಕಷ್ಟಪಟ್ಟು ಮಾತನಾಡುವ ಅವನ ನಾಲಿಗೆ ಹೊರಳುತ್ತಿರಲಿಲ್ಲ," ನಿನ್ನ...ಬಿಡಲ್ಲ, ನನ್ನ ಮಗ್ಳ ಮದ್ವೆ ವಿಷ್ಯ ಆ ಹುಡುಗಂಗೆ ತಿಳ್ಸಿದೀಯಂತೆ ನೀನು, ಆ ಹುಡ್ಗಾನೇ ಹೇಳ್ದ, ಅವನೀಗ ನನ್ ಮಗ್ಳ ಮದ್ವೆ ನಡ್ಯಕ್ಕೆ ಬಿಡಲ್ವಂತೆ" ಎಂಬುದನ್ನೇ ತೊದಲಾಗಿ ನುಡಿಯುತ್ತಿದ್ದ. ಆ ವ್ಯಕ್ತಿ ಜಲಜಳ ಪತಿಯೆಂಬುದು ,ಎಂಗೇಜ್ಮೆಂಟ್ ದಿನ ನೋಡಿದ್ದರಿಂದ ಅರಿವಿಗೆ ಬಂದು, "ಬನ್ನಿ ಒಳಗೆ." ಎಂದೆ,ಕುಷಲೋಪಚಾರಕ್ಕೆ ಅರ್ಹನಲ್ಲದ ಆ ವಕ್ತಿಗೆ. ಕೇಳುವ ಸೌಜನ್ಯತೆಯನ್ನೂ ಉಳಿಸಿಕೊಂಡಿರದ ಮನುಷ್ಯ ಹೀಗಂದ, "ಒಳಗಡೆ ಬರಲ್ಲಾ, ಆ ಹುಡ್ಗಾನೇ ಹೇಳ್ದ, ನನ್ ಮಗ್ಳ ಬಾಳಾನ್ನ ಹಾಳು ಮಾಡಿದ್ ನಿನ್ನ ಬಿಡಾಲ್ಲ, ನಿನ್ನಾ ಸುಟ್ಟಾಕ್ತೀನಿ, ನೀ ಹೆಂಗೆ ಬಾಳ್ವೆ ಮಾಡ್ತೀಯಾ ನೋಡ್ತೀನಿ,......." ಎಂದೇನೇನೋ ಅವಾಚ್ಯ ಶಬ್ಧಗಳನ್ನು ಹೇಳುತ್ತಾ ಮನೆಯ ಬಾಗಿಲಲ್ಲಿ ತೂರಾಡುತ್ತಿದ್ದ ಅವನ ಪರಿಸ್ಥಿತಿ ನೋಡಿ, ಜಲಜಳ ನೆನಪಾಗಿ ಅವನನ್ನು ಏನೂ ಅನ್ನದೇ ಕನಿಕರಗೊಂಡು ಕೇಳಿದೆ, "ಯಾವ ಹುಡುಗ?"
"ನಮ್ಮೆನೆಗೆ ಬಂದು ನನ್ ಮಗ್ಳ ಜೊತೆ ಲಲ್ಲೆ ಹೊಡಿತಿದ್ನಲ್ಲಾ, ನನ್ ಮಗ್ಳ ಮೊದಲ್ನೇ ಲವ್ವರ್...., ಅದೇ ಲೋಫರ್ ಹೇಳ್ದ." ಅಂದ. ಮುಂದಾಡಿದ ಶಬ್ದಗಳು ಕಿವಿ ಮೇಲೆ ಬಿದ್ದರೂ ನಾವು ಪಾಪಿಗಳಾಗುವುದು ಖಂಡಿತ ಎಂದುಕೊಂಡು, ನಿಧಾನವಾಗಿ ಬಾಗಿಲು ಹಾಕಿಕೊಂಡು ಕುಳಿತೆ. ಆ ಹುಡುಗಿಗೆ ಆಶ್ರಯ ನೀಡಿ, ಊಟ ಹಾಕಿದ್ದಕ್ಕೆ ಹುಡುಗಿಯನ್ನೂ ಸೇರಿ ಆ ಮನೆಯವರೆಲ್ಲಾ ಸೇರಿ ಕೊಟ್ಟಿದ್ದು ಇಟ್ಟುಕೊಳ್ಳಲಾಗದಷ್ಟು ಭಾರವಾದ ಉಡುಗೊರೆಯನ್ನು. ಅವಳನ್ನು ಮನೆಗೆ ಸೇರಿಸಿದ ದೊಡ್ದ ತಪ್ಪನ್ನು ನಾನೇ ಮಾಡಿಕೊಂಡ ಒಂದೇ ಒಂದು ಕಾರಣ ಯಾರನ್ನೂ ನನ್ನ ಬೆಂಬಲಕ್ಕೆ ಬಯಸುವಂತಿರಲಿಲ್ಲ. ಈ ನುಂಗಲಾರದ ವಿಷವನ್ನು ಎಲ್ಲ ಸೇರಿ ಹೊಟ್ಟೆತುಂಬುವಷ್ಟು ಉಣಿಸಿದ್ದರು.
ಸುಧಿ ಏನೂ ಮಾತಾಡಲಿಲ್ಲ. ಆಫೀಸಿಗೆ ಹೊರಡುವಾಗ "ನಾನು ಮೊದ್ಲೇ ಹೇಳಿದ್ದೆ ನಿಂಗೆ, ಯಾರ್ ಯಾರನ್ನೋ ಮನೆ ಒಳ್ಗಡೆ ಹೊಕ್ಕಸ್ಬೇಡ ಅಂತ, ಈಗ ನೋಡು ದಾರಿಯಲ್ಲಿ ಹೋಗ್ತಿದ್ದ ಮಾರೀನ ಮನೇಗೆ ಕರಸ್ಕೊಂಡ್ರು ಅನ್ನೋ ಹಾಗೆ ಆಯ್ತು. ಇನ್ನು ಆ ಮನುಷ್ಯ ಬಂದ್ರೆ ಬಾಗಿಲು ತೆಗೆಯೋದೇ ಬೇಡ, ಇನ್ನೂ ಕಷ್ಟ ಕೊಟ್ರೆ ಪೋಲೀಸ್ ಕಂಪ್ಲೆಂಟ್ ಕೊಟ್ರೆ ಆಯ್ತು, ಇವತ್ತು ಆಫಿಸಿಗೆ ರಜ ಹಾಕಿ ಮನೆಲ್ಲೇ ಇರು, ಸ್ವಲ್ಪ ಸಮಾಧಾನ ಮಾಡ್ಕೋ, ಸಂಜೆ ಬೇಗ ಬರ್ತೀನಿ." ಎಂದಿದ್ದು ಆ ಹೊತ್ತಿಗೆ ಸಮಾಧಾನ ನೀಡಿತ್ತಾದರೂ ಆ ಕುಡುಕನ ಅವಾಚ್ಯಗಳು ಪುನಃ ಪುನಃ ಕಿವಿಪಟಲಕ್ಕೆ ಬಡಿದು, ಹಿಂಸೆಯಾಗುವುದು ಸಾಮಾನ್ಯವಾಯಿತು. ಅವಳನ್ನು ಅನಾವಶ್ಯಕವಾಗಿ ಮನೆ ಸೇರಿಸಿಕೊಂಡ ಮೇಲೆ ಅನಿವಾರ್ಯವಾಗಿ ಹೊತ್ತುಕೊಂಡ ಜವಾಬ್ದಾರಿಗಳಿಗೆ ಸಿಕ್ಕ ಪ್ರತಿಫಲ ಇದಾಗಿತ್ತು.
ಆ ಹುಡುಗಿಗೆ ಎಂಗೇಜ್ಮೆಂಟ್ ಆದ ಹುಡುಗನೊಂದಿಗೇ ಮದುವೆಯಾಯಿತಾದರೂ ತಪ್ಪಿಲ್ಲದೇ ನಾನು ಅನುಭವಿಸುವಂತೆ ನೋವು ಕೊಟ್ಟ ಆ ಕಿರಾತಕ ಜೀವಿಗಳಿಗೆ ಮಾತ್ರ ಅನಿಸಿದ್ದು ಏನೂ ಇಲ್ಲ ಎಂಬುದು ಅವರ ಬುದ್ಧಿಮಟ್ಟವನ್ನು ತಾನೇ ತಾನಾಗಿ ಎತ್ತಿಹಿಡಿಯುತ್ತಿದ್ದುದರಿಂದ ನಾನದನ್ನು ಮರೆತಿದ್ದೂ ಆಗಿತ್ತು.
ಅವರುಗಳೆಲ್ಲ ತಪ್ಪೇ ಮಾಡದವರ ಗತ್ತಿನಲ್ಲಿ ನನ್ನ ಮುಂದೆ ಸುಳಿದಾಗೆಲ್ಲಾ ಅವರ ಸಣ್ಣತನದೆದುರು ನಾನೂ ಚಿಕ್ಕವಳಗಬಾರದೆಂದು ಅವರ ಪಾಡಿಗೆ ಅವರನ್ನ ಬಿಸಾಕಿದ್ದೂ ಆಗಿತ್ತು. ಇತ್ತ ಅವಳ ಮೊದಲನೆಯ ಬಡಪಾಯಿಯನ್ನು ಪೋಲೀಸ್ ಹೆಸರಿನ ಬೆದರಿಕೆಯಿಂದ ಬಾಯಿ ಮುಚ್ಚಿಸಿದ್ದೂ ಆಗಿತ್ತು. ದಿನ ಕಳೆದು ಈ ನೋವು ಉರುಳಿದ ದಿನಗಳೊಂದಿಗೆ ಸತ್ತು ಹೋಗಿದ್ದರೂ ಆ ನೋವಿನ ಪ್ರೇತ ಅವರನ್ನೆಲ್ಲಾ ಸುಮ್ಮನೆ ಬಿಟ್ಟಿದ್ದಕ್ಕಾಗಿ ನನ್ನನ್ನು ಕಾಡಿಸುತ್ತಿತ್ತು.
ಆರೇಳು ವರ್ಷಗಳ ಹಿಂದಿನ ಈ ಕಥೆ ಈ ದಿನದ ಬೆಳಗ್ಗಿನ ಕಾಲ್ ನಿಂದ ಮತ್ತೆ ನೆನಪಾಗಿತ್ತು. ಫೊನ್ ಅಲ್ಲಿ ಆ ಕಡೆಯಿಂದ ಮಾತನಾಡಿದ ಧ್ವನಿ ಜಲಜಳ ಗಂಡನದ್ದೇ ಎನ್ನುವಷ್ಟು ಖಚಿತವಾಗಿತ್ತು. ಅವನಲ್ಲ’ ಎಂದು ಮನಸ್ಸು ತಡೆಯುತ್ತಿರುವುದಕ್ಕೆ ಕಾರಣ ಜಲಜಳ ಗಂಡ ಕಳೆದ ದೀಪಾವಳಿಗೆ ಮೊದಲು ಮಿತಿಮೀರಿ ಕುಡಿದು, ಲಿವರ್ ಫೆಲ್ಯೂರ್ ನಿಂದ ತೀರಿಕೊಂಡ ವಿಷಯ.ಸತ್ತವನು ಹೇಗೆ ಎದ್ದು ಬಂದಾನು! ಎಂದು ಮನವನ್ನು ಸಂತೈಸಿಕೊಂಡರೂ ಮತ್ತದೇ ಅದೇ ಧ್ವನಿ ಮೊಳಗಿದಂತಾಗಿ ನಿದ್ರೆಯೇ ಬಾರದು. ನಿಧಾನಕ್ಕೆ ಹೊರಳಿ ಪಕ್ಕದ ಟೈಂಪೀಸ್ ನೋಡಿದರೆ ಇನ್ನೂ ರಾತ್ರಿ ಒಂದು ಗಂಟೆಯ ಜಾವ. ಬೆಳಕು ಮೂಡಲು ಇನ್ನೂ ಆರುಗಂಟೆಯ ಕಾಲ ಕಾಯಬೇಕು. ಸುಧಿಗೆ ಕಾಲ್ ಮಾಡಲೇ ಎಂದುಕೊಂಡೆ. ಬೇಡ ಇನ್ನೂ ಈಗಷ್ಟೆ ಆಫೀಸಿಗೆ ಹೋಗಿದ್ದರೆ ಅವರಿಗೆ ಟೆನ್ಶನ್ ಕೊಡುವುದು ಸೂಕ್ತವಲ್ಲ, ಇಂಪ್ಲಿಮೆಂಟೇಷನ್ ಅದೂ ಇದೂ ಎಂದುಕೊಂಡು ಬ್ಯುಸಿ ಬೇರೆ ಇದ್ದಿರಬಹುದು,ಇನ್ನೊಮ್ಮೆ ಇದೇ ಕಾಲ್ ಬಂದರೆ ನೋಡಿಕೊಂಡಾರಾಯಿತೆಂದು ಸುಮ್ಮನೆ ಆಚೀಚೆ ಹೊರಳುತ್ತಾ ನರಳುತ್ತಿದ್ದೆ. ಇದು ಯಾರ ಧ್ವನಿ! ಯಾರಿರಬಹುದು, ಯಾಕಿರಬಹುದು? ಎಂದೆಲ್ಲಾ ಯೋಚಿಸುತ್ತಿದ್ದೆ.
ಹತ್ತು ನಿಮಿಷವೂ ಆಗಿರಲಿಕ್ಕಿಲ್ಲ, ಸರಿ ರಾತ್ರಿಯ ನಿಶ್ಯಬ್ಧ , ನೀರವತೆಗಳ ನಡುವೆ ಮತ್ತೇನೋ ಕಳವಳ. ಯಾರೋ ನೋವಿನಿಂದ ಜೋರಾಗಿ ಮನೆಯಾಚೆ ಆರ್ತಿಸುತ್ತಿದ್ದಾರೆ. ಗಂಟಲನ್ನು ಗಟ್ಟಿಯಾಗಿ ಹಿಡಿದರೆ ಒಳಗಿಂದ ಬರುವ ಕರ್ಕಶವಾದ ಆರ್ತವ ಧ್ವನಿ. ಕೇಳುತ್ತ ಕೇಳುತ್ತ ಮನೆಗೆ ಸ್ವಲ್ಪ ಸ್ವಲ್ಪವೇ ಹತ್ತಿರ ಬಂದು, ಇದೀಗ ನಮ್ಮನೆಯ ಬಾಗಿಲನ್ನೇ ಸಮೀಪಿಸಿತು. "ಹಂ............ನಿನ್ನಾ ಬಿಡಲ್ಲಾ......ಹಂ.........ಹಂ.....ನಿನ್ನಾ ಬಿಡಲ್ಲಾ...."
ಭಯದ ತುತ್ತ ತುದಿ ತಲುಪಿ ಗಂಟಲೂ ಕಟ್ಟಿ, ಮೈಯೆಲ್ಲಾ ಗಟ್ಟಿಯಾಗಿ, ಭಯದಿಂದ ಕೈಕಾಲೆಲ್ಲಾ ಕಟ್ಟಿ ತತ್ತರಿಸಿ ಹೋದೆ. ಮುಸುಕೆಳೆದುಕೊಂಡು ಕಣ್ಮುಚ್ಚಿ ಮಲಗಿದರೆ ಆ ಧ್ವನಿ ಎಡೆಬಿಡದೇ ಕೇಳಿಸುತ್ತಿದೆ. ಕತ್ತಲೆಯಲ್ಲಿ ಕಣ್ಣು ಮತ್ತಷ್ಟು ಹುದುಗಿ ಮನಸ್ಸೆಲ್ಲಾ ಭಯದ ಗೂಡಾಗಿ ಕಣ್ಣುಬಿಡಾಲಾರದ ಆತಂಕ, ಭಯ! ಅಮೇರಿಕೆಯ "ಹ್ಯಾಲೊವಿನ್ ಫೆಸ್ಟಿವಲ್ ಬಗ್ಗೆ ಎಲ್ಲೋ ಕೇಳಿದ ನೆನಪು ಬಂತು. ಹೌದು, ಇದು ಜಲಜಳ ಗಂಡನ ಆತ್ಮವೇ ಸರಿ, ‘ಗರ್ ರ್ರ್ರೆನ್ನುವ ಬದಲಾಗಿ ‘ನಿನ್ನಾ...ಬಿಡಲ್ಲಾ.... ಎನ್ನುತ್ತಿದೆ. ಹೌದು, ಆಗ ಕಾಲ್ ಮಾಡಿದ್ದು ಕೂಡ ಜಲಜಳ ಗಂಡನ ಪ್ರೇತವೇ ಸರಿ ಎಂಬುದು ಗೊತ್ತಾಗುವಷ್ಟರಲ್ಲಿ ಕಾಲೆಲ್ಲಾ ಮಡಿಸಿ, ರೇಷ್ಮೆಹುಳದ ಗೂಡಿನಷ್ಟು ಮುಡುಗಿ ಹೋಗಿದ್ದೆ, ದೇಹ ಹತೋಟಿ ಕಳೆದುಕೊಂಡು ಗಟ್ಟಿಯಾಗಿ ಹೋಗಿದ್ದರೂ ಯೋಚಿಸುತ್ತಲಿದ್ದೆ. ಈ ಸೆಷನ್ ಎಗ್ಸಾಮ್ ಮುಗಿಸಿ ಫ್ರೆಂಡ್ಸ್ ಜೊತೆ ಟ್ರಿಪ್ ಗೆ ಹೋಗಿದ್ದ ಸುಶ್ರವ್ ನ ನೆನಪಾಯಿತು. ಅವನಾದರೂ ಇದ್ದಿದ್ದರೆ ಸಂಧರ್ಭಕ್ಕೆ ಕೈಜೋಡಿಸಿ ಧೈರ್ಯವಾಗುತ್ತಿದ್ದ. ಈಗ ಪುಟಾಣಿ ಸುಖಿ ಜೊತೆಯಲ್ಲಿದ್ದಿದ್ದು ಧೈರ್ಯ ಮತ್ತಷ್ಟು ಉಡುಗಿ ಹೋಗಿತ್ತು, ಈ ಭೂತದ ಕೈಯಲ್ಲಿ ಸಿಕ್ಕಿದರೆ ಮಾತ್ರ ನಮ್ಮೆಲ್ಲರ ಮುದ್ದು ಸುಖಿಯೂ ನನ್ನೊಡನೆ ಬಲಿಯಾಗುವುದನ್ನು ನೆನೆದು ಧೈರ್ಯ ಉಡುಗಿ ದುಃಖವಾಗತೊಡಗಿತ್ತು. ಮತ್ತೆ ಸುಧಿಯ ನೆನಪು ಹೊರಳೊರಳಿ ಬಂತು.
ಮತ್ತೆ ಬಾಗಿಲು ‘ದಬ ದಬ’ನೇ ಸದ್ದು, ಕೈ ಉಗುರುಗಳಿಂದ ಗೀರುವ ‘ಗರ್ರ್ರ್ರ್ರ್ರ್ರ್ರ್ ಗರ್ರ್ರ್ರ್ರ್ರ್ರ್ರ್’ ಶಬ್ಧ, ಒಮ್ಮೆ ನಗು, ಮತ್ತೆ ಮ್.....ಎಂದು ನರಳುವ ಧ್ವನಿ, ಒಮ್ಮೆ ಗಂಡಸಿನ ಗಹಗಹಿಕೆ, ಮತ್ತೆ ಹೆಂಗಸಿನ ಕೀರಲಿನಂತೆ ’ಹ್ರೀ...ಹ್ರೀ..... ಎನ್ನುವ, ಮತ್ತೆ ’ಮ್...ಅ...ಮ್’ ಎನ್ನುವಂಥಹ ಧ್ವನಿ, ನಿನ್ನಾ... ಬೀಡಲ್ಲಾ....ಹ್ಮೂ.......... ಸುಮಾರು ಒಂದುವರೆಗಂಟೆಗಳ ಕಾಲ ಇದೇ ನಡೆಯುತ್ತಿದೆ. ಭಯದಲ್ಲಿ ಗಟ್ಟಿಯಾಗಿ ಮುಚ್ಚಿದ್ದ ಕಣ್ಣುಗಳು ಸುರಿಸಿದ ನೀರು ಮೈಯನ್ನೆಲ್ಲಾ ಸುತ್ತಿಕೊಂಡಿದ್ದ ಬ್ಲಾಂಕೆಟನ್ನು ನೆನೆಯಿಸಿದ್ದು ಮೊದಮೊದಲು ಬಿಸಿಯಾಗಿ, ಆ ನಂತರ ತಣ್ಣಗಾಗಿ ಮುಖವನ್ನು ಸ್ಪರ್ಷಿಸುವಾಗ ನನಸೆಂದು ಮತ್ತೆ ಸ್ಪಷ್ಟಪಡಿಸುವ ಗಳಿಗೆ. ಕ್ಷಣಕ್ಷಣಕ್ಕೂ ಗಂಟಲುಬ್ಬಿ ಬರುವ ಅಳು ಸರಿಯಾಗಿ ಆಚೆ ಬರದೇ ಕೆಮ್ಮಿನ ರೂಪದಲ್ಲಿ ಬಂದು, ಕಣ್ಣೀರಾಗಿ ಹೊರಬರುವ ಕಾರ್ಯಕ್ರಮ ನಡೆದೇ ಇದ್ದಂತೆ, ಒಂದೇ ಸಲಕ್ಕೆ ಎಲ್ಲಾ ಸ್ತಬ್ಧವಾಗಿತ್ತು. ಐದು ನಿಮಿಷಗಳಲ್ಲಿ ಮನಸ್ಸು ಸ್ತಿಮಿತಕ್ಕೆ ಬಂದು, ಬಿಗಿ ಹಿಡಿದ ಉಸಿರನ್ನು ನಿಧಾನಕ್ಕೆ ಹೊರದಬ್ಬುತ್ತಿರುವಂತೆಯೇ, ಕಟ್ಟಿ ಹೋಗಿದ್ದ ಕೈಕಾಲೆಲ್ಲಾ ನಿಧಾನಗತಿಯಲ್ಲಿ ಸಡಿಲವಾಗಿ, ದೇಹಕ್ಕೆ ಸ್ಪರ್ಷಜ್ನಾನ ಬಂದು ಮೈ‘ ಜುಂ...ಎಂದು ‘ಜುಂಯ್’ ಗುಟ್ಟಿ ನಡುಗುತ್ತಿರುವುದು ನನಗೇ ಭಾಸವಾಗುತ್ತಿತ್ತು. ಎದ್ದು ಏನನ್ನೂ ಮಾಡಲಾಗದ ಈ ಅಸಹಾಯಕತೆಗೆ ಬಿಕ್ಕಿ ಬಿಕ್ಕಿ ಅತ್ತರೆ ಕೆಮ್ಮು ಬಂದು, ಹೊಟ್ಟೆ ತೊಳಸಿದಂತೆನಿಸಿ ಅಳುವಿಗೆ ಸರಿಯಾಗಿ ಆಚೆ ಬರಲು ಭಯವಾಗಿ ಒಳಗೊಳಗೇ ನಡುಗುತ್ತಿತ್ತು.
ಸಂಭಾಳಿಸಿಕೊಂಡು ಇನ್ನೇನು ಹಾಸಿಗೆಗೆ ತಲೆ ಕೊಡಬೇಕು, ಅಷ್ಟರಲ್ಲಿ ಮತ್ತದೇ ಧ್ವನಿ, "ನಿನ್ನಾ.......ಬಿಡಲ್ಲಾ.......ನಿನ್ನಾ........" ಈಗ ಆ ಧ್ವನಿ ಬಾಗಿಲ ಬಳಿ ಇಲ್ಲಾ, ಆ ಧ್ವನಿ ಬೆಳಗ್ಗಿನ ಬೆಳಕನ್ನು, ಸಂಜೆಯ ಸೊಬಗನ್ನು, ರಾತ್ರಿಯ ಕತ್ತಲ ನೀರವತೆಯನ್ನು ಮನೆಯೊಳಕ್ಕೆ ಸರಬರಾಜು ಮಾಡುವ, ಮನೆಯ ಮುಂಭಾಗದ ಪ್ರೀತಿಯ ಕಿಟಕಿಯಿಂದ ಕೇಳಿಸುತ್ತಿದೆ. ಆತ್ಮೀಯವೆನಿಸುವ, ಒಂಟಿತನಕ್ಕೆ ಗೆಳೆತನ ಒದಗಿಸುವ ಕಿಟಕಿ, ಮೊದಲ ಬಾರಿಗೆ ಭಯ ಹುಟ್ಟಿಸುವ ತಾಣವಾಗಿ ಬಿಂಬಿಸುತ್ತಿದೆ. ಗಾಜನ್ನು ‘ಕರ ಕರ ಕರ’ ಎಂದು ಗಿರ್ರನೇ ಹೊರಗಿನಿಂದ ಯಾರೋ ಪರಚುತ್ತಿದ್ದಾರೆ, ಅರ್ಧಗಂಟೆಗಳ ಕಾಲ ಮತ್ತೆ ಇದೇ! ಯಾರೋ ಬಾಗಿಲನ್ನು ಬೂಟಿನಿಂದ ಒದೆಯುವ ಶಬ್ಧ. ಕಿಟಕಿಯಿಂದ ಬಾಗಿಲಿಗೆ, ಬಾಗಿಲಿಂದ ಕಿಟಕಿಗೆ ಓಡಿ ರವಾನೆಯಾಗುತ್ತ, ಹೊರಗಡೆ ಓಡುತ್ತಿರುವುದು ಪ್ರಾಣಿಯೊ ಮನುಷ್ಯನೋ ಆಗಿರದೆ ಪ್ರೇತವೆಂಬುದನ್ನು ಯೋಚಿಸಿದಷ್ಟೂ ಯಾವುದಕ್ಕೂ ಅವಕಾಶವಿಲ್ಲದಷ್ಟು ಆತಂಕ ಸುತ್ತಲೂ ಸೋಂಕಿಕೊಳ್ಳುತ್ತಲಿತ್ತು. ಎದೆಬಡಿತದ ಸದ್ದು ಬಾಗಿಲಿನ ಬಡಿತಕ್ಕಿಂತ ಜೋರಾಗಿ, ಒಳಗೊಳಗೇ ನುಲುಗಿ, ಮತ್ತೆ ಮುಸುಕಲ್ಲಿ ಮುದುಡಿ ಮಲಗಿಕೊಂಡೆ. ಹತ್ತು ನಿಮಿಷಗಳಲ್ಲಿ ಈ ಗಲಾಟೆಗಳೆಲ್ಲಾ ನಿಧಾನಕ್ಕೆ ಒಂದೊಂದೇ ಹೆಜ್ಜೆ ಹಿಂದೆ ಸರಿದಿಟ್ಟು ಕ್ರಮೇಣ "ನಾ...ನುಊಊ ನಿನ್ನಾಆಆಆಆಆ... ಬಿಡಾಲ್ಲಾಆಆಆಆ" ಎಂದು ಅಬ್ಬರಿಸುತ್ತಿದ್ದ ಧ್ವನಿಯು ನಾನು ಸಿಗದ್ದಕ್ಕಾಗಿ ಅಳುವಂತೆ ಈಗ ಆರ್ತವವಾಗಿ ಅಳುತ್ತಾ ಕೊಂಚ ಕೊಂಚವೇ ದೂರವಾಗಿ, ಅಳುತ್ತ ಗಾಳಿಯಲ್ಲಿ ತೇಲಿ ಲೀನವಾಯಿತು.
ಆ ನಂತರದಲ್ಲಿ ಶುರುವಾಗಿದ್ದು ಸಿಡಿಲು ಗುಡುಗುಗಳ ಆರ್ಭಟ! ಫಕ ಫಕ’ನೆ ನಗುವ ಸಿಡಿಲು, ಹಿಂದೆಯೇ ಆರ್ಭಟಿಸುವ ಗುಡುಗು! ಗಢ್ ಗಡಾಢ್.. ಎನ್ನುವ ಸಿಡಿಲು ಗುಡುಗಿನ ಆರ್ಭಟವು ಭೀತಿಯನ್ನು ಇನ್ನಷ್ಟು ಹುಟ್ಟಿಸಿ, ಅಮ್ಮನ ಮಡಿಲಿಂದ ದೂರವಾಗಿ ಬೆದರಿ ಚೀರುವ ಮಗುವಿನ ಹಾಗೆ ಬಿಕ್ಕುತ್ತಾ ಮಲಗಿದ್ದೇ ನೆನಪು, ನಿದ್ರಾದೇವಿ ತನ್ನ ಸೆರೆಯೊಳಗೆ ನನ್ನನ್ನು ಎಳೆದುಕೊಂಡಿದ್ದಳು. ಅರ್ಧಂಬರ್ಧ ಕತ್ತಲೆ, ಮಲಗಿದಲ್ಲೇ ಕತ್ತು ಹೊರಳಿಸಿ ಕಣ್ಣುಜ್ಜಿ ಕಣ್ಬಿಟ್ಟು ನೋಡಿದರೇ....... ಬೆಡ್ ರೂಮ್ ಬಾಗಿಲ ಕಮಾನಿಗೆ ಅಡ್ಡವಾಗಿ ಜಲಜಳ ಗಂಡನ ವಿಕಾರ ಆಕೃತಿ ನಿಂತಿದೆ. ಕೆದರಿದ ಕಂದು ಕೂದಲು, ಕತ್ತಲೆಯಲ್ಲೂ ಕಣ್ಣನ್ನು ಅರಸುತ್ತಿದೆ. ಕೆಂಪನೆಯ ಒಂದೇ ಒಂದು ಕಣ್ಣು ಕತ್ತಲೆಯನ್ನು ಚುಂಬಿಸಿ ತನ್ನೊಳಗೆ ಹೀರಿಕೊಳ್ಳುತ್ತಾ ನನ್ನೆಡೆಗೆ ಬರುತ್ತಲಿದೆ. ಹತ್ತಿರ ಹತ್ತಿರಕ್ಕೆ ಬಂತು, ಬಂತು...ಬಂತು....ಬಂದೇ ಬಿಟ್ಟಿತು. "ಪುಟ್ಟಿ.......ಸುಖಿಯನ್ನೇನೂ ಮಾಡ್ಬೇಡ, ನನ್ನನ್ನ ಬೇಕಾದ್ರೂ ಸಾಯಿಸು" ಎಂದು ನಾನು ಬೇಡಿಕೊಳ್ಳುತ್ತಿದ್ದಂತೆ ಹತ್ತಿರ ಹತ್ತಿರಕ್ಕೆ ಊದ್ದನೆಯ ಕೈ ಬಂದು.....ಬಂದೂ..ಸುಖಿಯ ಗಂಟಲನ್ನು ಮಾವಿನ ಹಣ್ಣನ್ನು ಹಿಚುಕಿ ರಸ ತೆಗೆದಷ್ಟೇ ಸರಾಗವಾಗಿ, ನಿರ್ಧಯದಿಂದ ಗಂಟಲನ್ನು ಆಕೃತಿಯ ಕೈಗಳೆರಡೂ ಹಿಚುಕುತ್ತಿತ್ತು. ಕೊಸರಾಡಿ ಕೊಸರಾಡಿ ಇದ್ದ ಬಲವನ್ನೆಲ್ಲಾ ಒಟ್ಟುಗೂಡಿಸಿ ತಳ್ಳಿದ್ದಷ್ಟೇ ಆ ವಿಕಾರ ಆಕೃತಿ ಮತ್ತೆ ಕಾಣಿಸದಂತೆ ಓಡಿ ಹೋಗಿತ್ತು.
ಪ್ರೇತದ ಕೈಗಳಿಂದ ಸುಖಿಯನ್ನು ಬಿಡಿಸಿಕೊಂಡಿದ್ದೆ ಅವಳನ್ನು ಮುದ್ದಾಡುತ್ತಾ ಹುಚ್ಚಿಯಂತೆ ದುರ್ಬಲಳಾಗಿ ಅಳುತ್ತಿದ್ದೆ. ಅಳುತ್ತಳುತ್ತಾ ಈಗ ನಿಜವಾಗಿಯೂ ಎಚ್ಚರಾಗಿತ್ತು. ಪ್ರೇತದ ಗಲಾಟೆ, ಆ ನಂತರದ ಗುಡುಗಿನ ಆರ್ಭಟಗಳಲ್ಲಿ ನಲುಗಿ ಮಲಗಿದ್ದ ಸುಪ್ತಮನಸ್ಸು, ರಾತ್ರಿ ಬಂದು ಕಣ್ಣಿಗೆ ಕಾಣಿಸದ ಪ್ರೇತಕ್ಕೆ ನಿದ್ರೆಯಲ್ಲಿ ಆಕಾರವೊಂದನ್ನು ಕೊಟ್ಟಿತ್ತು. ಸುಧಿ ಮನೆಯಲ್ಲಿಲ್ಲದ್ದು ತುಂಬಾ ಅನಾಥಪ್ರಜ್ನೆ ಕಾಡತೊಡಗಿತ್ತು.ಮನೆಗೆ ಬಂದ ಪ್ರೇತವನ್ನು ಏನಾದರೂ ಟ್ರಿಕ್ ನಿಂದ ಕಳಿಸಬೇಕು, ಇಲ್ಲಾ ಟ್ರೀಟ್ ಮಾಡಿ ಕಳಿಸಬೇಕು, ಇಲ್ಲಾಂದ್ರೆ ಹೀಗೆ ಕನಸಲ್ಲಿ ಬಂದು ಕಾಡೋದು ಎಂದುಕೊಳ್ಳುತ್ತಾ ಎದ್ದುನಡೆದೆ.
ಕಣ್ಣನ್ನು ತಿಕ್ಕಿ ತಿಕ್ಕಿ ಬಿಟ್ಟು ಸುತ್ತಲೂ ನೋಡಿ ವಿಕಾರ ಆಕೄತಿ ಅಲ್ಲಿಲ್ಲ ಎಂಬುದನ್ನು ಧೃಡಮಾಡಿಕೊಂಡು ಎದ್ದಾಗ ಮನಸ್ಸು ದೇಹಗಳೆಲ್ಲಾ ತುಂಬ ದಣಿದಿದ್ದವು. ಇಷ್ಟೆಲ್ಲಾ ಆದರೂ ಸುಖಿ ಇನ್ನೂ ನಿದ್ರೆಯಲ್ಲೇ ಇದ್ದಿದ್ದು ಒಂದಿಷ್ಟು ನೆಮ್ಮದಿಯೆನಿಸಿತ್ತು.ಎದ್ದು ಮುಖ ತೊಳೆದು ಬರುವಾಗ ಮತ್ತೆ ನೆನಪಾಗಿದ್ದು ರಾತ್ರಿಯ ಬಾಗಿಲ ಬಡಿದ ಸದ್ದಿನದು! ಭಯ ಪುನರಾವರಿಸತೊಡಗಿತ್ತು. ಸಾವರಿಸಿಕೊಂಡು ಕಿಟಕಿಯತ್ತ ನೋಡಿದರೆ ಕಿಟಕಿಯ ಗಾಜುಗಳನ್ನೆಲ್ಲಾ ಯಾರೋ ಪ್ರಬಲವಾಗಿ ಗೀರಿದ್ದರಿಂದ ಒಡೆದು ಬಿದ್ದಿದ್ದವು. ಕೆಳಗೆ ನೆಲದಲ್ಲಿ ಸುಮ್ಮನೆ ಮಲಗಿದ್ದ ಗಾಜಿನ ಚೂರುಗಳು ಈಗ ಹುಟ್ಟುತ್ತಿದ್ದ ಹೊಂಬಳಕಿಗೆ ಹೊಳೆ ಹೊಳೆದು ಕಾರ್ಪೆಟನ್ನೆಲ್ಲಾ ಶೃಂಗರಿಸಿದ್ದವು. ಹಸಿರು ಪೈಂಟಿನ ಮುಂಬಾಗಿಲನ್ನು ತೆರೆದರೆ ಅದು ಬೆಳ್ಳನೆಯ ಗೀರುಗಳಿಂದ, ಮಣ್ಣಿನ ಕಲೆಗಳಿಂದ ವಿಕೃತ ರಂಗೋಲೆಯ ಚಿತ್ತಾರವಾಗಿತ್ತು. ಭಯ ಇಂಚಿಂಚಾಗಿ ಎಲ್ಲೆಂದರಲ್ಲಿ ಸೂಜಿಯಂತೆ ಚುಚ್ಚುತ್ತ ನನ್ನೊಳಗೆ ಹೊಕ್ಕು, ನನ್ನನ್ನು ಕಂಪನಕ್ಕೊಳಪಡಿಸುವ ತರಾತುರಿಯಲ್ಲಿತ್ತು. ದೃಷ್ಟಿಯನ್ನು ಬಾಗಿಲಿನಿಂದ ಮುಂದೆ ಹೊರಳಿಸಿದರೆ ಹರಿದು ಚೂರಾಗಿದ್ದ ಪ್ರೇತವು ಬಿಟ್ಟು ಹೋದ ಹಳೆಯ ಶೂವೊಂದು ಜೊತೆಯಿಲ್ಲದೇ ಬಿಕಾರಿಯಂತೆ ಮಲಗಿತ್ತು.
ಭಯ ಮಿತಿಮೀರಿ ಉಮ್ಮಳಿಸಿ ಬಂದು ಬಾಗಿಲು ಹಾಕಿಕೊಂಡು ಮನಸ್ಸು ಸ್ತಿಮಿತದಲ್ಲಿಲ್ಲದೇ ಇದಕ್ಕೆಲ್ಲಾ ಪರಿಹಾರವೊಂದನ್ನು ಹುಡುಕುತ್ತಲಿತ್ತು. ಗೊತ್ತುಗುರಿಯಿಲ್ಲದೇ ಮನೆಯೊಳಗೆ ಚಲಿಸುತ್ತಿದ್ದ ದೇಹಕ್ಕೆ ಒಮ್ಮೆಲೇ ಏನಾಯಿತೋ ಅರಿಯದು. ಎದೆಯೊಳಗೆ ಕಲ್ಲಿನಿಂದ ಯಾರೋ ಕುಟ್ಟಿದಂತೆ ನೋವು,ಡಬ ಡಬ’ ಹೊಡಕೊಳ್ಳುವ ಹೃದಯ, ರಕ್ತದೊತ್ತಡ ಜಾಸ್ತಿಯಾಗಿತ್ತೇನೋ! ಹೊಟ್ಟೆಯಲ್ಲಿ ಉರಿಯೊಂದಿಗಿನ ಸಂಕಟ, ಕಣ್ಣು ಅಚ್ಚನೀಲಿಯಬಣ್ಣದಾಗಸದಲ್ಲಿ ಗರಗರನೇ ತಿರುಗುತ್ತಿದೆ.ಮೈಯಲ್ಲಿನ ಬೆವರೆಲ್ಲ ಸುರಿದು ಖಾಲಿಯಾಗಲು ತೆಗೆದುಕೊಂಡಿದ್ದು ಹತ್ತೇ ಹತ್ತು ನಿಮಿಷಗಳ ಕಾಲ. ವಿಲವಿಲನೇ ಒದ್ದಾಡುತ್ತಿದ್ದ ದೇಹದಿಂದ ಉಸಿರು ಮಾತ್ರ ನಿಲ್ಲಲಿಲ್ಲ. ಉಸಿರು ಗಾಳಿಯಲ್ಲಿ ಹಾರಿಕೊಂಡು ಸೋಫಾ ಮೇಲೆ ಗೋಡೆಯಲ್ಲಿ, ಮೇಜಿನ ಕೆಳಗೆ, ಅಡುಗೆಮನೆಯಲ್ಲಿ, ಹೂದಾನಿಯ ಒಳಗೆ ಎಲ್ಲೆಂದರಲ್ಲಿ ನಾನೀಗ ಹಾರಾಡುತ್ತಿದ್ದೇನೆ. ಖುಷಿಯೋ ಖುಷಿ! ನನ್ನ ಖುಷಿಗೆಲ್ಲಾ ಮಣ್ಣೆರಚಿದಂತಾಗಿದ್ದು ಸುಖಿ "ಗುಊಊಡ್ ಮಾಆಆರ್ನಿಂಗ್ ಅಮ್ಮಾಆಆ" ಎನ್ನುತ್ತ ಬಂದು ಸೋಫಾದಲ್ಲಿ ಮಲಗಿದ್ದ ನನ್ನ ಜಡದೇಹಕ್ಕೆ ಒರಗಿಕುಳಿತು ಅವಳಮ್ಮನನ್ನು ನಿದ್ದೆಯಿಂದ ಏಳಿಸುವ... ಏಳಿಸುವ ಯತ್ನವನ್ನೆಲ್ಲಾ ನೋಡುತ್ತಿದ್ದಂತೆ! ಸದಾ ಹಾಸ್ಯಪ್ರಜ್ನೆಯ ಎಂಟು ವರ್ಷದ ಸುಖಿ ಅಮ್ಮಗೆ ಕಚಗುಳಿಯಿಟ್ಟು ಅಮ್ಮನ ನಗಿಸಲು ಹವಣಿಸುತ್ತಿದ್ದಾಳೆ."ಪ್ರಿಟೆಂಡ್ ಮಾಡ್ಬೇಡ, ಏಳು ಅಮ್ಮಾಆಆ." ಎನ್ನುತ್ತಾ.
"ಅಲ್ಲಿಲ್ಲ ಕಣೇ ಸುಖೀ , ನಾ ಇಲ್ಲಿದ್ದೇನೆ ಕಣೋ.......ಅಲ್ಲಿಲ್ಲ, ಇಲ್ಲಿ ನೋಡಾಮ್ಮಾ, ನಿಮ್ಮಮ್ಮ ಇಲ್ಲಿದ್ದೀನಿ...." ಎನ್ನುವ ನನ್ನಾತ್ಮದ ದೀನ ಧ್ವನಿ ಅವಳಿಗೆ ಕೇಳಿಸುತ್ತಲೇ ಇಲ್ಲ! ಎಬ್ಬಿಸಲಾಗದ ಚಿರನಿದ್ರೆಯಲ್ಲಿ ನಾನಿದ್ದೇನೆ ಎಂದು ಅವಳಿಗೆ ಸಾಂತ್ವನ ಹೇಳಲೂ.. ಮನೆಯೊಳಗೆ ನರಪಿಳ್ಳೆಯೂ ಇಲ್ಲ. ಆ ಪುಟಾಣಿಯ ಪ್ರಯತ್ನಗಳೆಲ್ಲಾ ಸೋತುಹೋಗಿ, ಕೊನೆಯ ಯತ್ನವೆಂಬಂತೆ ಜೋರಾಗಿ ಅಳುತ್ತಿದ್ದಾಳೆ. ನನ್ನ ದೇಹವನ್ನು ಮುದ್ದಿಸುತ್ತಾಳೆ. ನಗುತ್ತಾಳೆ, ಮತ್ತೆ ಅಳುತ್ತಾಳೆ! "ಅಮ್ಮಾಆಆಆಆಆ" ಎಂದು.
ನಾನೂ ಮುದ್ದುಮಗಳಿಗಾಗಿ,ಅವಳು ಅನಾಥೆಯಾಗಿದ್ದಕ್ಕಾಗಿ ಕಣ್ಣೀರೇ ಇಲ್ಲದೇ ಅಳುತ್ತಿರುವುದು ಅವಳಿಗೆ ಕಾಣಿಸುತ್ತಿಲ್ಲ. ಯಾರಿಗೂ ಕಾಣಿಸದಷ್ಟು ಅನಂತ ದೂರಕ್ಕೆ ಹಾರಿಬಿಟ್ಟಿದ್ದೇನೆ. ಆ ಹುಡುಗಿಯನ್ನು ಟ್ರೀಟ್ ಮಾಡಿ ಈಗ ‘ಟ್ರಿಕ್ ಆರ್ ಟ್ರೀಟ್’ ಎನ್ನುವ ಸರದಿ ನನ್ನ ಆತ್ಮಕ್ಕೆ. ನನ್ನ ಪುಟಾಣಿಯ ಕಣ್ಣೀರನ್ನೆಲ್ಲಾ ನನ್ನ ದೇಹ ಇಂಗಿಸಿಕೊಳ್ಳುತ್ತಿದೆ. ನನ್ನಾತ್ಮ ಮಾತ್ರ ಒಂದು ಕ್ಷಣ ಗಹಗಹಿಸಿ ನಕ್ಕರೆ, ಅಳಲುಗಳೆಲ್ಲಾ ಗಾಳಿಯಲ್ಲಿ ನನ್ನೊಡನೆ ತೇಲಾಡುತ್ತವೆ. ಅಳಲುಗಳೆಲ್ಲಾ ಅಳಲುಗಳನ್ನು ತೀರಿಸಿಕೊಳ್ಳುವ ಖುಷಿಯಲ್ಲಿದ್ದರೆ ನನ್ನಾತ್ಮ ಗೋಡೆಯ ಮೂಲೆಯೊಂದರಲ್ಲಿ ಕುಳಿತು ವಿಚಿತ್ರವಾಗಿ ಅಭಿನಯಿಸುತ್ತದೆ. ಒಮ್ಮೆ ‘ಕಿಲ ಕಿಲ ಕಿಲ’ ನಕ್ಕು, ಇನ್ನೊಮ್ಮೆ ‘ಗಳಗಳಗಳ’ನೇ ಅಳುತ್ತಿದೆ. "ನನ್ನ ಸುಧಿಗಾಗಿ ನಾನು ಇರಬೇಕಾಗಿತ್ತು, ಮುದ್ದು ಕಂದಮ್ಮಗಳಿಗಾಗಿ ಇದ್ದು ಜಯಿಸಬೇಕಾಗಿತ್ತು" ಮಗಳ ಪಕ್ಕ ಕುಳಿತ ಆತ್ಮ ಮತ್ತೆ ಅಳುತ್ತದೆ ಅವಳ ಕಣ್ಣೀರಿನೊಂದಿಗೆ,ಅವಳ ಕಣ್ಣೀರಿಗಾಗಿ,ನಾನು ಸತ್ತುಹೋಗಿದ್ದಕ್ಕಾಗಿ,ಜೊತೆಯಾಗಿ ಭಾವ ಬಿಂದುಗಳನ್ನ ಹರಿಸುತ್ತಾ ಸಾವಿನೊಂದಿಗೇ ಸತ್ತುಹೋದ ನನ್ನ ಭಾವಕ್ಕಾಗಿ. |