A First Kannada Website of Chitradurga District....... ಕನ್ನಡ ರಾಜ್ಯೋತ್ಸವ ಶುಭಾಷಯಗಳು......  www.chitharadurga.com

ಕಲೆ

ಮುಖಪುಟ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಪ್ರಾತಃಸ್ಮರಣೀಯರು ಸಾಹಿತ್ಯ ಜನಪದ ಕಲೆ ಛಾಯಾಗ್ರಹಣ ನಮ್ಮ ಬಗ್ಗೆ
 
'ಚಿತ್ರಕಲಾ'ದುರ್ಗ
'ಚಲನಚಿತ್ರ'ದುರ್ಗ
ಜಾನಪದ ಕಲೆಗಳು
ನಾಟ್ಯಕಲೆ

  

ಚಿತ್ರದುರ್ಗ ಜಿಲ್ಲೆಯ ಜನಪದ ಕಲೆಗಳು

 ಧಾರ್ಮಿಕ ಕಲೆಗಳು:

ಭಾರತದಲ್ಲಿ ಯಾವುದಕ್ಕೆ ಕೊರತೆ ಇದ್ದರೂ, ದೇವರುಗಳಿಗೆ ಮಾತ್ರ ಕೊರತೆ ಇಲ್ಲ. ಮುಕ್ಕೋಟಿ ದೇವತೆಗಳನ್ನು ಸೃಷ್ಟಿಸಿದ ದೇಶ ನಮ್ಮದು. ನಮ್ಮಲ್ಲಿ ದೇವರ ಉತ್ಸವ, ಜಾತ್ರೆ, ಅಥವಾ ಹಬ್ಬಗಳಲ್ಲಿ ಅನೇಕ ಜನಪದ ಕಲೆಗಳ ಸಂಗಮ ಆಗುವುದು ಉಂಟು. ಇದಕ್ಕೆ ಸೊಗಸಾದ ಉದಾಹರಣೆ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆ. ದೇವರನ್ನು ಮೈಮೇಲೆ ಆವಾಹಿಸಿಕೊಳ್ಳುವುದು ಒಂದು ಕಲೆ. ಇದನ್ನು ಮೈದುಂಬುವ ಕಲೆ ಎನ್ನುತ್ತಾರೆ. ಪೂಜಾರಿ ಅಥವಾ ಭಕ್ತನ ಮೈಮೇಲೆ ದೇವರ ಆವಾಹನೆ ಆಗುವಲ್ಲಿ ನಮ್ಮ ವಾದ್ಯಗಳ ಪಾತ್ರ ಪ್ರಧಾನ. ತಪ್ಪಡೆ ಮತ್ತು ಉರುಮೆಗಳಲ್ಲಿ ಉತ್ಸಾಹದ ವಿದ್ಯುತ್ ಸಂಚಯನ ಮೂಡಿಸುವ ಶಕ್ತಿ ಇದೆ. ವಾದ್ಯಗಳಲ್ಲದೇ ಮೈತುಂಬುವ ಕ್ರಿಯ ಕಳಾಹೀನವಾಗಿ ಕಾಣುತ್ತದೆ. ಇದೇ ಸಂಧರ್ಭದಲ್ಲಿ ಮಣೇವು ಮೂಲಕ ವಿಶಿಷ್ಟ ರೀತಿಯಲ್ಲಿನ ಫಲಾಹಾರ ಸೇವೆನೆಯೂ ಒಂದು ಕಲೆಯಾಗಿ ಬಿಡುತ್ತದೆ. ಈ ಮೆರವಣಿಗೆಯಲ್ಲಿ ಭಕ್ತರ ಕಗ್ಗದ ಪದದ ಹಾಡುಗಳ ಸೇವೆ, ಕುಣಿತದ ಸೇವೆಯೂ ಜೊತೆಜೊತೆಯಲಿ ನಡೆಯುವುದುಂಟು. ಈ ಮೆರವಣಿಗೆಯಲ್ಲಿ ಸ್ವಾಮುಗಳ ಕುಣಿತದ ಇವೆಲ್ಲಕ್ಕೂ ಶೃತಿ ಹಿಡಿದಂತೆ ಸೋಬಾನೆ ಪದಗಳ ಸೋನೆಮಳೆ ನಮ್ಮ ಗರತಿಯರಿಂದ ನಡೆಯುತ್ತದೆ. ಈ ಗುಂಪಿನಲ್ಲಿ ಎಲ್ಲಮ್ಮನ ಜೋಗಿಗಳೂ ತಮ್ಮ ಚೌಡಿಕೆ ಸೇವೆ ನಡೆಸುತ್ತಾರೆ. ಇದೇ ಸಂಧರ್ಭದಲ್ಲಿ ಧಾರ್ಮಿಕ ಭಿಕ್ಷೆಯವರಾದ ದಾಸಯ್ಯಗಳು, ಬುಡುಬುಡಿಕೆಯವರು, ಹೆಳವರು, ಕೊಂಡಮಾಮಗಳು, ಕೊಡೆಕಲ್ಲಯ್ಯಗಳು, ಉರಿಮಾರಮ್ಮನವರು, ಅಸಾದಿಗಲು ನೋಡಬಹುದು.

 

ಕಿನ್ನರಿ ಜೋಗಿಗಳು ಅಥವಾ ಅರ್ಜುನ ಜೋಗಿಗಳು ಎಂದು ಕರೆಯುವ ಜನಪದ ಮನರಂಜಕರ ಪ್ರಧಾನ ನೆಲೆಯೊಂದು ಮೊಳಕಾಲ್ಮೂರು ತಾಲ್ಲೂಕಿನ ನುಂಕಿಮಲೆ ಭೈರವನ ನೆಲೆ, ಸಾಂಸ್ಕೃತಿಕ ಮಹತ್ವವುಳ್ಳದ್ದು, ಕಿಂದರಿ ಜೋಗಿಗಳು, ಅತಿಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಚಳ್ಳಕೆರೆ ತಾಲ್ಲೂಕಿನ ದೇವರಹಳ್ಳಿಯೂ ಕುತೂಹಲಕಾರವಾದ ಅಧ್ಯಯನಕ್ಕೆ ವಸ್ತುವಾಗಬಲ್ಲದು. ನಮ್ಮ ಜಿಲ್ಲೆಯಲ್ಲಿನ ಗೊರವರ ವಿಶಿಷ್ಟ ದೋಣಿ ಸೇವೆ, ಡೊಳ್ಳು ಕುಣಿತಗಳು ಗಮನಾರ್ಹ.

 

ಹಗಲು ವೇಷದವರು ಆಗಾಗ್ಗೆ ಇಣುಕು ಹಾಕುತ್ತಾರೆ. ಇವರು ವೈವಿದ್ಯಮಯವಾದ ವೇಷಗಳನ್ನು ಹಾಕುವುದರಿಂದ ಇವರನ್ನು ಬಹುರೂಪಿಗಳು ಎಂದು ಕರೆಯುತ್ತಾರೆ. ಕೋಲೆಬಸವ (ಗಂಗೆತ್ತಿನವರು) ಅಪರೂಪವಾಗುತ್ತಿದ್ದಾರೆ. ಜಿಲ್ಲೆಯ ಪೂರ್ವಭಾಗದ ಹಿರಿಯೂರು ತಾಲ್ಲೂಕಿನ ಗಡಿಯಂಚಿನ ಲಂಬಾಣಿ ತಾಂಡಗಳಲ್ಲಿ ತಂಬಿಗೆ ಕುಣಿತ ಎಂಬ ವಿಶಿಷ್ಟ ಕುಣಿತ ಪ್ರಚಾರದಲ್ಲಿದ್ದರೆ, ಜಿಲ್ಲೆಯ ಪಶ್ಚಿಮದಂಚಿನ ದಾವಣಗೆರೆ ಪರಿಸರದಲ್ಲಿ ಲಗೋರಿ ಕುಣಿತ ಎಂಬ ವಿಶಿಷ್ಟ ಲಂಬಾಣಿ ಕಲೆ ಇರುವುದನ್ನು ಗಮನಿಸಬಹುದು. ಹಿರಿಯೂರು ತಾಲ್ಲೂಕಿನ ಕರಿಯೋಬೆನಹಳ್ಳಿ ಎಂಬ ಗ್ರಾಮದಲ್ಲಿ ಗ್ರಾಮದೇವತೆ ಮಾರಕ್ಕನಿಗೆ ನಡೆಯುವ ಅರಿಶಿನ ತೂರುವ ಭಂಡಾರದ ಸೇವೆ ಒಂದು ವಿಶಿಷ್ಟ ಜನಪದ ಕುಣಿತದಿಂದ ಕೂಡಿದೆ. ಜಿಲ್ಲೆಯಾದ್ಯಂತ ಇರುವ ಗುರು ಭಜನೆ, ಶಿವಭಜನೆ, ರಾಮಭಜನೆ, ಸಾಂಪ್ರದಯಗಳೊಂದಿಗೆ ಅಯ್ಯಪ್ಪ ಭಜನೆಯೂ ಸೇರಿಕೊಂಡಿದೆ. ಜುಂಜಪ್ಪನ ಗಣಿ ಸಂಪ್ರದಾಯ ನಮ್ಮ ಜಿಲ್ಲೆಗೆ ವಿಶಿಷ್ಟವಾದ ನಮ್ಮ ಜಿಲ್ಲೆಯನ್ನು ಸಾಂಸ್ಕೃತಿಕವಾಗಿ ಪ್ರತಿನಿಧಿಸುವ ಕಲೆಯಾಗಿದೆ.

 

ಮನೋರಂಜನಾ ಕಲೆಗಳು:

ಈ ಮನರಂಜನೆಯ ಕಲೆಗಳು ಧಾರ್ಮಿಕ ಪ್ರಕ್ರಿಯೆಗೆ ಥಳುಕು ಹಾಕಿಕೊಂಡೇ ಬರುವುದನ್ನು ಪೀರಲ ಹಬ್ಬದಲ್ಲಿ ಗಮನಿಸಬಹುದು. ಹಿಂದೂ, ಮುಸ್ಲಿಂ ಭಾವೈಕ್ಯದ ಈ ಹಬ್ಬವನ್ನು ವೇಷಗಳ ಹಬ್ಬ ಎಂದೇ ಕರೆಯಲಾಗುತ್ತದೆ. ಈ ಸಂಧರ್ಭದಲ್ಲಿ ಅಲಾಬಿ ಗುಂಡಿಯ ಸುತ್ತ ಕುಣಿಯುವ ಅಲಾಬಿ ಕುಣಿತ, ಅದರ ಹೆಜ್ಜೆಪಾಡು ಬಹಳ ವಿಶಿಷ್ಟವಾದುದು. ಈ ಹಬ್ಬದ ಇಡೀ ರಾಜವಾದ್ಯವೆಂದರೆ ತಪ್ಪಡೆ. ಇದರ ಹತ್ತು ಹಲವು ಚಮತ್ಕಾರಗಳಿಂದ ಹಬ್ಬಕ್ಕೆ ಅಪೂರ್ವ ಶೋಭೆ ತರುತ್ತದೆ. ಅತ್ಯಂತ್ಯ ಜನಪ್ರಿಯವಾದ ಹುಲಿವೇಷ, ಪೋಟಿ ವೇಷ, ಕರಡಿ ವೇಷಗಳು ರಂಗು ತುಂಬುತ್ತವೆ. ರಂಜನೆಗಾಗಿ ಹಿಡಂಬಿವೇಷ, ಸತ್ತೋರ ವೇಷ ಹಾಕುವುದುಂಟು. ಮ್ಯಾಸಬೇಡರು ಮೋಡಿ ಕಲೆಯನ್ನು ಪ್ರದರ್ಶಿಸುವುದುಂಟು. ಮನರಂಜನಾ ಪ್ರಧಾನವಾದ ಮರಗಾಲು ಕುಣಿತ ಎಂಬ ವಿಶಿಷ್ಟ ಹಬ್ಬದಲ್ಲಿ ಆಚರಿಸಲ್ಪಡುತ್ತದೆ. ಗಣೇಶನ ಹಬ್ಬದಲ್ಲಿ ಕೀಲುಕುದುರೆ ಕುಣಿತವೂ ಮನರಂಜನೆಯ ಕಲೆಯಾಗಿ ಪ್ರದರ್ಶಿತವಾಗುತ್ತಿದೆ.

 

ಕೋಲಾಟವಂತೂ ಕರ್ನಾಟಕಾದ್ಯಂತ ಪ್ರಚಲಿತವಿರುವ ಕಲೆಯಾದರೂ, ಈ ಜಿಲ್ಲೆಯ ಮ್ಯಾಸಬೇಡರ, ಕಾಡುಗೊಲ್ಲರು, ಕೋಲು ಮೇಳಕ್ಕೆ ಪ್ರಸಿದ್ಧಿ. ಇವರ ಮದುವೆಗಳಲ್ಲಿನ ಹಸೆಯ ರಂಗೋಲಿಗಳು ವಿಶಿಷ್ಟವಾಗಿದೆ. ಸಿರಿಗೆರೆಯ ಮಠ ಜಾನಪದ ಸಂವರ್ಧನೆಯಲ್ಲಿ ವಿಶಿಷ್ಟ ಪಾತ್ರ ವಹಿಸಿದ್ದು, ಪ್ರತಿವರ್ಷ ಸೋಬಾನೆ, ವೀರಗಾಸೆ ಸ್ಪರ್ಧೆಗಳನ್ನು ಏರ್ಪಡಿಸುತ್ತಿರುವುದು ಸ್ತುತ್ಯಾರ್ಹ. ಜನಪದ ಕಲೆಯ ವೀರಗಾಸೆಯಂತೂ ಎಲ್ಲಾ ಹೊಸತನ್ನು ಹೀಗೆ ಮೈಗೂಡಿಸಿಕೊಂಡು ಬೆಳೆಯಬಲ್ಲದು ಎಂಬುದಕ್ಕೆ ಚಿತ್ರದುರ್ಗದ ಶಿವಣ್ಣ ಎಂಬ ವಿಶಿಷ್ಟ ವೀರಗಾಸೆ ಕಲಾವಿದ ಖಡ್ಗಗಳನ್ನು ಕನ್ನಡವಲ್ಲದೇ ತಮಿಳು, ತೆಲುಗು, ಹಿಂದಿ, ಉರ್ದು, ಇಂಗ್ಲೀಷ್ ನಲ್ಲೂ ಮಾಡಿ ತೋರಿಸಿ ಹೊಸ ಶಕೆ ಪ್ರಾರಂಭಿಸಿರುವುದು ಸ್ವಾಗತಾರ್ಹ. (ಸಿ.ಜಿ.ಕೆ. ನಿರ್ದೇಶನದ ಮಹಾಚೈತ್ರದಲ್ಲಿ ವೀರಗಾಸೆಯ ಬಳಕೆ ಅದ್ಭುತವಾಗಿ ಮೂಡಿಬಂದಿದೆ).

 

ಸಂಪ್ರದಾಯ, ಆರಾಧನಾ ಪ್ರಧಾನವಾದ ಕಹಳೆ, ಚನೂಳ, ಉರುಮೆ, ತಪ್ಪಡೆಗಳು, ಸನಾಯಿ, ನಂದಿಕೋಲು ಕುಣಿತಗಳು ಇಂದಿರ ಕಾಲಕ್ಕೆ ತಕ್ಕಂತೆ ಚುನಾವಣೆ ಮೆರವಣಿಗೆಗಳಲ್ಲಿ ಮೆರೆದು ಮರುಹುಟ್ಟು ಪಡೆಯುತ್ತಿರುವುದನ್ನು ಕಾಣಬಹುದು. ಜನಪದ ಕಲೆಗಳು ಎಂಥ ಸಂಕಷ್ಟವನ್ನು ಎದುರಿಸಿಯೂ ಬದುಕಬಲ್ಲವೆಂಬುದನ್ನು ಇಲ್ಲಿಯ ಕೆಲವು ಕಲೆಗಳು, ವಾದ್ಯಗಳು ತೋರಿಸುತ್ತವೆ. ಈ ಜಾನಪದ ಗಂಗೆ ಒಂದು ಚಿರಂತನ ಚಿಲುಮೆ.


(ಆಧಾರ: ದುರುಗ ಜಾನಪದ ಡಾ||ಮೀರಾಸಾಬಿಹಳ್ಳಿ ಶಿವಣ್ಣ)

© 2008 www.chitharadurga.com. Best fit for 1024 X 768 Resolution.

Created by Raghavendra.R & Bharatkumar.B.V.